ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ, ಮಳೆಗಾಲಕ್ಕೆ ಮಾಡಿಕೊಳ್ಳಬೇಕಾದ ತಯಾರಿ, ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿವೆ. ಈ ಬಗ್ಗೆ ಹೆಚ್ಚು ಗಮನಹರಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಿಯಂತ್ರಣಕ್ಕೆ ತರಬೇಕು. ಇನ್ನೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ಎಲ್ಲೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.
ಪಾಲಿಕೆ ಅಧಿಕಾರಿಗಳಿಗೆ ಆಡಳಿತಾಧಿಕಾರಿಯ ಸೂಚನೆಗಳು:
- ನಗರದ ಪಾದಚಾರಿ ಮಾರ್ಗಗಳಲ್ಲಿ ಕರ್ಬ್ ಸ್ಟೋನ್ಸ್, ಸ್ಲಾಬ್‌ಗಳು ಮುರಿದು ಕಡೆಗಳಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು.
- ಪಾದಚಾರಿಗಳ ಓಡಾಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾಡಬೇಕು.
- ರಸ್ತೆಬದಿ ಸುರಿದಿರುವ ಕಟ್ಟಡಗಳ ಭಗ್ನಾವೇಶಗಳನ್ನು ತೆರವುಗೊಳಿಸಬೇಕು.
- ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು.
- ಯಾವುದೇ ದೂರುಗಳನ್ನು ನೀಡಿದಾಗ ಅದನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು.
- ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು.
- ಪಾಲಿಕೆಯ ಪ್ರಮುಖ ಆದಾಯದ ಮೂಲ ಆಸ್ತಿ ತೆರಿಗೆಯಾಗಿದ್ದು, ಎಲ್ಲಾ ವಲಯಗಳಲ್ಲಿಯೂ ಆಸ್ತಿ ತೆರಿಗೆ ಸರಿಯಾಗಿ ಸಂಗ್ರಹಿಸಬೇಕು.
ರಾಕೇಶ್ ಸಿಂಗ್ ಮಾತಿಗೆ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ತ್ವರಿತವಾಗಿ ಸ್ಪಂದಿಸುವ ಸಲುವಾಗಿ ಪಾಲಿಕೆಯ ಎಲ್ಲಾ ವಲಯಗಳಲ್ಲಿಯೂ ಒಂದೊಂದು ನಿಯಂತ್ರಣ ಕೊಠಡಿಗಳಿವೆ. ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ವಾರ್ಡ್ ಮಟ್ಟದಲ್ಲಿ 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ಮರ ತೆರವುಗೊಳಿಸಲು ಅಗತ್ಯ ಸಿಬ್ಬಂದಿ, ಸಲಕರಣೆ ಹಾಗೂ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಜಲಾವೃತಗೊಂಡ ಪ್ರದೇಶಗಳಲ್ಲಿ 45 ಹೆಚ್ಪಿ ಪಂಪ್ಗಳಿಂದ ನೀರೆತ್ತಲು ವ್ಯವಸ್ಥೆ ಮಾಡಿಕೊಂಡಿರಲಾಗಿರುತ್ತದೆ ಎಂದು ವಿವರಿಸಿದರು.
ನಂತರ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಾಯ್ದೆ ಜಾರಿಯಾಗಿದ್ದು, ಅದರಂತೆ ಎಲ್ಲರೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ವಲಯ ಆಯುಕ್ತರುಗಳು ಆಯಾ ವಲಯಗಳಲ್ಲಿ ಕನಿಷ್ಟ 3 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ದೂರುಗಳಿಗೆ 1 ಗಂಟೆ ಸಮಯ ಮೀಸಲಿರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು. ಆಸ್ತಿ ತೆರಿಗೆ ಸಂಗ್ರಹ ಮಾಡಲು ಸೂಕ್ತಕ್ರಮ ವಹಿಸಬೇಕು. ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ಗುರುತಿಸಿ, ತೆರಿಗೆ ವ್ಯಾಪ್ತಿಗೆ ತರಲು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯೇಂದ್ರ ದುಡ್ಡು ಹಂಚುವುದರಲ್ಲಿ ಮಾತ್ರ ಚಾಣಕ್ಯ, ಬೇರೆ ಯಾವುದರಲ್ಲೂ ಅಲ್ಲ: ಸಿದ್ದು ಟಾಂಗ್