ಬೆಂಗಳೂರು: ಜಾಗತಿಕ ಮಹಾಮಾರಿ ಕೋವಿಡ್‍ನಿಂದ ನಾಡಿನ ಜನತೆ ತಲ್ಲಣಗೊಂಡಿದ್ದು, ದಿನನಿತ್ಯ ಹಲವಾರು ಜನರು ಅಸುನೀಗುತ್ತಿರುವ ಸನ್ನಿವೇಶ ಎಲ್ಲರನ್ನು ದಿಗ್ಭ್ರಾಂತರನ್ನಾಗಿಸಿದೆ. ನಿತ್ಯವೂ ಕೊರೊನಾ ಹರಡುವಿಕೆಯ ಭಯ ಎಲ್ಲೆಡೆ ವ್ಯಾಪಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರೂ ರೋಗದ ಹರಡುವಿಕೆಯು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
![Bangalore](https://etvbharatimages.akamaized.net/etvbharat/prod-images/kn-bng-03-basavaraja-horatti-write-letter-to-cm-script-7208083_21052021120241_2105f_1621578761_102.jpg)
ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಸವರಾಜ್ ಹೊರಟ್ಟಿ ಅವರು, ಮೂರು ದಿನಗಳ ಹಿಂದೆ ನೀವು (ಮುಖ್ಯಮಂತ್ರಿಗಳು) 1250 ಕೋಟಿ ರೂ. ಪ್ಯಾಕೇಜ್ ಬಿಡುಗಡೆಗೊಳಿಸಿರುವುದು ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಮಾಧಾನ ತಂದಿದ್ದು, ಅದನ್ನು ನಾನೂ ಸ್ವಾಗತಿಸುತ್ತೇನೆ ಎಂದಿದ್ಧಾರೆ.
![Bangalore](https://etvbharatimages.akamaized.net/etvbharat/prod-images/kn-bng-03-basavaraja-horatti-write-letter-to-cm-script-7208083_21052021120241_2105f_1621578761_58.jpg)
ಸಣ್ಣ ವ್ಯಾಪಾರಸ್ಥರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು ಮೊದಲಾದವರಿಗೆ ಈ ಪ್ಯಾಕೇಜ್ ಆಶಾಕಿರಣವಾಗಿದೆ. ಆದರೆ, ಸಮಾಜದಲ್ಲಿ ಪವಿತ್ರ ವೃತ್ತಿ ಎಂದು ಪರಿಗಣಿಸಲ್ಪಡುವ ಮತ್ತು ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡುತ್ತಾ ಸಮಾಜದ ಪ್ರೀತಿ ಪಾತ್ರರಾಗಿರುವ ಶಿಕ್ಷಕ ಸಮುದಾಯಕ್ಕೆ ಅಂದರೆ, ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜುಗಳಲ್ಲಿನ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮಾತ್ರ ತಾವು ಘೋಷಿಸಿರುವ ಪ್ಯಾಕೇಜ್‍ನಲ್ಲಿ ಯಾವುದೇ ಅನುಕಂಪ, ಸಹಾನುಭೂತಿ ಕಾಣದಿರುವುದರಿಂದ ಈ ಪತ್ರ ಬರೆಯುತ್ತಿರೆ ಎಂದಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂದಿ ಸಹ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವುದು ನಮ್ಮೆಲ್ಲರ ಗಮನದಲ್ಲಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಕೊರೊನಾ ಕಾರಣದಿಂದ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಇವರುಗಳು ವೇತನವಿಲ್ಲದೆ ಅಭದ್ರತೆಯಲ್ಲಿ ನರಳುತ್ತಿದ್ದಾರೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಬಹುತೇಕ ಶಿಕ್ಷಕರಿಗೆ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಸಂಬಳವಿಲ್ಲ. ಇದರಿಂದಾಗಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಕ್ಕೂ ಹೆಚ್ಚು ಶಿಕ್ಷಕರು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಾ ತೀವ್ರ ಸಂಕಷ್ಟದಲ್ಲಿದ್ದಾರೆ. ಈಗ ಲಾಕ್ಡೌನ್ನಿಂದ ಶಾಲೆಗಳು ಮುಚ್ಚಿದ್ದು, ಮತ್ತೆ ಆ ಶಿಕ್ಷಕರು ಉದ್ಯೋಗವಿಲ್ಲದೇ ಹಾಗು ಜೀವನ ನಿರ್ವಹಣೆಗೆ ಸಂಬಳವಿಲ್ಲದೇ ಪರದಾಡುವಂತಾಗಿದೆ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.
![Bangalore](https://etvbharatimages.akamaized.net/etvbharat/prod-images/kn-bng-03-basavaraja-horatti-write-letter-to-cm-script-7208083_21052021120241_2105f_1621578761_58.jpg)
ಇದರಿಂದಾಗಿ ಹಲವು ಶಿಕ್ಷಕರು ಹೊಟ್ಟೆ ಹೊರೆಯಲು ತರಕಾರಿ, ಕಾಳು, ಹಣ್ಣು ಹಂಪಲ ಮಾರಾಟ ಮಾಡುವ ಅನಿವಾರ್ಯತೆಯಲ್ಲಿದ್ದರೆ, ಇನ್ನೂ ಕೆಲವರು ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಗಳಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ಬಂದಿವೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಯಾವುದೇ ಸೌಲಭ್ಯಗಳಿಲ್ಲದೇ ನೌಕರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಾಲ-ಸೋಲ ಮಾಡಿ ಜೀವನ ನಡೆಸಬೇಕೆಂದರೆ ಯಾರೂ ಸಾಲ ನೀಡುತ್ತಿಲ್ಲವಾದ್ದರಿಂದ ಇವರ ಜೀವನವು ನರಕಯಾತನೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಸರ್ಕಾರವು ಎಲ್ಲಾ ಹಂತದವರಿಗೂ ಪ್ಯಾಕೇಜ್ ನೀಡುತ್ತಿರುವುದು ಸರಿ. ಆದರೆ, ಶಿಕ್ಷಕರನ್ನೂ ಈ ವ್ಯಾಪ್ತಿಯಲ್ಲಿ ಸೇರಿಸದೇ ಇರುವುದು ಅವರಿಗೆ ಸರ್ಕಾರ ಅನ್ಯಾಯವೆಸಗಿದಂತಾಗುತ್ತದೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರೂ ಸಹ ಈ ಬಗ್ಗೆ ಗಮನ ಹರಿಸಬೇಕು ಎಂದು ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಬಲವಾಗಿ ಆಗ್ರಹಿಸಿದ್ದಾರೆ.
ಕೊರೊನಾ ಭೀತಿಯಿಂದ ಮಕ್ಕಳು ಶಾಲೆಗೆ ಬರದಿದ್ದರೆ, ಪಾಲಕರು ಶುಲ್ಕ ಕೊಡುವುದಿಲ್ಲ. ಸರ್ಕಾರ ಆನ್‍ಲೈನ್ ಪಾಠ ಪ್ರಾರಂಭಿಸಿದೆ. ಪಾಲಕರಿಗೆ ಫೀ ಕೊಡುವಂತೆ ಒತ್ತಾಯ ಮಾಡಬಾರದೆಂದು ಹೇಳಿರುವುದರಿಂದ ಆರ್ಥಿಕವಾಗಿ ಸಾಕಷ್ಟು ಸಮರ್ಥರಿದ್ದವರನ್ನೂ ಸಹ ಶಿಕ್ಷಣ ಸಂಸ್ಥೆಗಳು ಶುಲ್ಕ ಕೊಡುವಂತೆ ಒತ್ತಾಯಿಸುವಂತಿಲ್ಲ. ಒತ್ತಾಯಿಸಿದರೆ ದೂರು ಕೊಡುತ್ತಾರೆಂಬುದು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಹವಾಲು. ಒಂದು ತಿಂಗಳು ಅಥವಾ ಹೆಚ್ಚೆಂದರೆ ಎರಡು ತಿಂಗಳ ಸಂಬಳವನ್ನು ಆಡಳಿತ ಮಂಡಳಿಯವರು ಸಿಬ್ಬಂದಿಯವರಿಗೆ ಕೊಡಬಹುದು. ಅದು ಸಹ ಕೆಲವು ಸಾಮಾನ್ಯ ಶಾಲೆಗಳಿಗೆ ಇದು ಕಷ್ಟದ ಕೆಲಸ. ಕೆಲವು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಹಿಂದೇಟು ಹಾಕುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಅನುದಾನರಹಿತ ಶಾಲೆ ಮತ್ತು ಕಾಲೇಜುಗಳಿಗೆ ಸಾಕಷ್ಟು ತೊಂದರೆಯಾಗಿ ಉಸಿರುಗಟ್ಟುವ ವಾತಾವರಣವಿದ್ದು, ಸರ್ಕಾರ ಇವರಿಗೂ ಒಂದು ಪ್ಯಾಕೇಜ್ ನೀಡಿ ಅವರ ನೆರವಿಗೆ ಧಾವಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಸರ್ಕಾರಕ್ಕೆ ಯಾವುದೂ ಕಷ್ಟವಲ್ಲ. ಸರ್ಕಾರ ಬಾಕಿ ಉಳಿಸಿಕೊಂಡಿರುವ ಆರ್.ಟಿ.ಇ ಶುಲ್ಕವನ್ನೂ ಪಾವತಿಸುತ್ತಿಲ್ಲ. ಬಾಕಿ ಪಾವತಿಗೆ 700 ಕೋಟಿ ರೂಪಾಯಿ ಕಾಯ್ದಿರಿಸಲಾಗಿದ್ದರೂ ರಾಜ್ಯದ ವಿವಿಧ ಶಾಲೆಗಳಿಗೆ ಪಾವತಿಸಬೇಕಾದ 600 ಕೋಟಿ ರೂ. ನೀಡುತ್ತಿಲ್ಲ. ಆದ್ದರಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಪ್ರಮಾಣದಲ್ಲಿ ಸರ್ಕಾರ ಆರ್ಥಿಕ ನೆರವು ನೀಡಲೇಬೇಕಾಗುತ್ತದೆ. ಆದ ಕಾರಣ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ತಕ್ಷಣವೇ ವಿಶೇಷ ಪ್ಯಾಕೇಜ್ ರೂಪದ ಮಾಸಿಕ ಸಹಾಯಧನ ಬಿಡುಗಡೆ ಮಾಡಬೇಕೆಂದು ಶಿಕ್ಷಕರ ಪರವಾಗಿ ಮನವಿ ಮಾಡುವುದಾಗಿ ಪತ್ರದಲ್ಲಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.