ಬೆಂಗಳೂರು: ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವಿಳಂಬವಾಗುವುದಿಲ್ಲ. ಇಂದು ದೆಹಲಿಯಿಂದ ರಾಜ್ಯಕ್ಕೆ ವೀಕ್ಷಕರು ಆಗಮಿಸುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ.ನಗರದಲ್ಲಿನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನಿರ್ಧಾರ ಮಾಡಲು ವಿವಿಧ ಹಂತಗಳಿವೆ. ರಾಜ್ಯ ಹಂತದಲ್ಲಿ ಶಾಸಕರ ಸಭೆ ನಡೆಸಿ, ನಂತರ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿ ನಿರ್ಧಾರವನ್ನು ಕೇಂದ್ರಕ್ಕೆ ಕಳಿಸಲಾಗುತ್ತದೆ. ಅಲ್ಲಿ ಪಕ್ಷದ ಕೇಂದ್ರೀಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ನಂತರ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ರೀತಿ ಹಂತಹಂತವಾಗಿ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಿಎಂ ರೇಸ್ನಲ್ಲಿ ಬೊಮ್ಮಾಯಿ:
ಸಿಎಂ ರೇಸ್ನಲ್ಲಿ ತಮ್ಮ ಹೆಸರಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ಸುದ್ದಿಯನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಇಷ್ಟು ದಿನ ಬೇರೆ ಬೇರೆಯವರ ಹೆಸರುಗಳು ಬರುತ್ತಿವೆ. ಇಂದು ಯಾಕೋ ನನ್ನ ಹೆಸರು ಸಹ ಕೇಳಿ ಬರುತ್ತಿದೆ. ಅಷ್ಟನ್ನು ಮಾತ್ರ ಹೇಳಬಲ್ಲೆ. ತವರು ಜಿಲ್ಲೆಯ ಶಾಸಕರು ನಾನು ಮಂತ್ರಿಯಾಗುವುದಕ್ಕಿಂತ ಮೊದಲೂ ಬರುತ್ತಿದ್ದರು, ಮಂತ್ರಿಯಾದ ನಂತರವೂ ಬರುತ್ತಿದ್ದರು. ಈಗಲೂ ಬರುತ್ತಿದ್ದಾರೆ. ಶಾಸಕರು ನಮ್ಮ ಮನೆಗೆ ಬರುವುದು ಹೊಸದಲ್ಲ. ಆದ್ರೆ ನಾನು ಮುಖ್ಯಮಂತ್ರಿ ಆಗಬೇಕು ಎಂದು ಹೇಳಲು ಯಾರೂ ಬರುತ್ತಿಲ್ಲ ಎಂದರು.
ದೆಹಲಿ ಸಭೆ ನಿರ್ಧಾರದ ಮಾಹಿತಿ ಇಲ್ಲ:
ದೆಹಲಿಯಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ ಮುಂದಿನ ನಾಯಕತ್ವ ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆ ಆಗಿರುತ್ತದೆ. ಆದರೆ, ಯಾವ ಆಯಾಮದಲ್ಲಿ ಚರ್ಚೆಯಾಗಿದೆ ಎನ್ನುವ ವಿವರಗಳು ನಮಗೆ ಲಭ್ಯವಿಲ್ಲ. ದೆಹಲಿಯಲ್ಲಿ ಆಗಿರುವ ಸಭೆಯಲ್ಲಿ ಕೇವಲ ಉನ್ನತ ಮಟ್ಟದ ನಾಯಕರು ಮಾತ್ರ ಇರುವುದರಿಂದ ನಮಗೆ ಏನು ಗೊತ್ತಾಗುವುದಿಲ್ಲ. ಈ ವಿಚಾರದಲ್ಲಿ ನಮಗೆ ನಿಖರವಾದ ಯಾವುದೇ ಮಾಹಿತಿ ಇಲ್ಲ. ಧರ್ಮೇಂದ್ರ ಪ್ರಧಾನ್ ಜೊತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬರುವ ಸಾಧ್ಯತೆ ಇದೆ. ಆದರೆ, ಇನ್ನೂ ಖಚಿತವಾಗಿಲ್ಲ. ಮುಂದಿನ ಮೂರು-ನಾಲ್ಕು ದಿನದಲ್ಲಿ ಹೊಸ ಸಿಎಂ ನೇಮಕ ಪ್ರಕ್ರಿಯೆ ಅಂತಿಮ ಹಂತಕ್ಕೆ ಬರಬಹುದು. ಹೊಸ ಸಿಎಂ ಆಯ್ಕೆಗೆ ಹೆಚ್ಚಿನ ಕಾಲಾವಕಾಶ ಹಿಡಿಯುವುದಿಲ್ಲ ಎಂದು ತಿಳಿಸಿದರು.
ಹೈಕಮಾಂಡ್ನಿಂದ ಪ್ರತಿನಿಧಿಗಳು ಬಂದ ನಂತರ ಮುಂದಿನ ಸಭೆ ಇತ್ಯಾದಿಗಳು ನಿರ್ಧಾರವಾಗಲಿವೆ. ಯಾರನ್ನ ಭೇಟಿಯಾಗಬೇಕು, ಏನು ಸಲಹೆ ಪಡೆಯಬೇಕು ಎನ್ನುವುದನ್ನು ಪಕ್ಷದ ಅಧ್ಯಕ್ಷರು ಇತರರ ಜೊತೆ ಸೇರಿ ಚರ್ಚಿಸಲಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಪಡೆಯಲಾಗುತ್ತದೆ. ಅದರ ನಂತರ ಪಕ್ಷದ ಕೋರ್ ಕಮಿಟಿ, ನಂತರ ಕೇಂದ್ರ ಕೋರ್ ಕಮಿಟಿ ಮತ್ತು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಅಂತಿಮವಾಗಿ ನಿರ್ಧಾರವಾಗಲಿದೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಇದೆಲ್ಲಾ ಪ್ರಕ್ರಿಯೆ ಮುಗಿಯುವ ವಿಶ್ವಾಸವಿದೆ ಎಂದರು.
ಲಿಂಗಾಯತ ಸಮುದಾಯಕ್ಕೆಂದು ವಿಶ್ಲೇಷಣೆ ಮಾತ್ರ:
ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎನ್ನುವುದು ಕೇವಲ ರಾಜಕೀಯ ವಿಶ್ಲೇಷಣೆ ಮಾತ್ರ. ಹಲವಾರು ರೀತಿಯಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ. ರಾಜಕೀಯ ಸ್ಥಿತಿಗತಿಗಳನ್ನು ಬೇರೆಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಅಷ್ಟೇ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಸಿದ್ದುಗೆ ನೈತಿಕ ಹಕ್ಕಿಲ್ಲ:
ಸಿದ್ದರಾಮಯ್ಯ ಸೋತಿದ್ದಾರೆ. ಅವರಿಗೆ ನಮ್ಮ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಮತ್ತು ಹೊಸ ಮುಖ್ಯಮಂತ್ರಿ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತಿದೆ. ಹೊಸ ಮುಖ್ಯಮಂತ್ರಿಯಾಗುವ ಮೊದಲು ಈ ರೀತಿ ಜನರಲ್ಲಿ ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿರುವುದು ಒಬ್ಬ ಮಾಜಿ ಮುಖ್ಯಮಂತ್ರಿ ಆಡುವ ಮಾತಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಬಿಜೆಪಿಗೆ ಬಂದವರು ಕಾಂಗ್ರೆಸ್ ಗೆ ಮರಳಲ್ಲ:
ಬಿಜೆಪಿ ನಂಬಿ ಬಂದಿರುವವರು ಮತ್ತೆ ಕಾಂಗ್ರೆಸ್ ಗೆ ಹೋಗುವ ಚಿಂತನೆ ಮಾಡಿಲ್ಲ. ಅಂತಹ ಸನ್ನಿವೇಶ ಇಲ್ಲ, ಅದೆಲ್ಲಾ ಕೇವಲ ಊಹಾಪೋಹ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೊಟ್ಟೆ ಡೀಲ್ ಪ್ರಕರಣ: ಸಚಿವೆ ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಸೇರಿ ನಾಲ್ವರ ವಿರುದ್ಧ ದೂರು