ಬೆಂಗಳೂರು: ಪದೇ ಪದೇ ನಾನು ಚೆಕ್ ಕೊಡ್ತೀನಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳ್ತಾರೆ. ಆದರೆ ಅವರ ಚೆಕ್ ನಡೆಯಲ್ಲ ಅಂತ ಜನರಿಗೆ ಗೊತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಅರಮನೆ ಮೈದಾನದಲ್ಲಿ ತುಂಬಿದ್ದ ಜನಸ್ತೋಮ ತಪ್ಪು ಮಾಹಿತಿಯಿಂದ ಆಗಮಿಸಿದ್ದಾಗಿದೆ. ವಿಪಕ್ಷಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಚೆಕ್ ಕೊಡುತ್ತೇನೆ, ಅವರನ್ನು ಅವರ ರಾಜ್ಯಕ್ಕೆ ಕಳಿಸಿ ಅನ್ನೋದಲ್ಲ. ಕಾಂಗ್ರೆಸ್ನವರಲ್ಲಿ ಇಬ್ಬಗೆಯ ನೀತಿ ಇದೆ. ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನ ಕರೆ ತನ್ನಿ ಅಂತಾ ಹೇಳಿದ್ದರು, ಈಗ ಹೊರರಾಜ್ಯದವರು ಬಂದಿದ್ದರಿಂದಲೇ ಕೊರೊನಾ ಸೊಂಕು ಹೆಚ್ಚಾಗಿ ಹರಡುತ್ತಿದೆ ಅಂತಿದ್ದಾರೆ. ಕಾಂಗ್ರೆಸ್ನವರದ್ದು ಡಬಲ್ ಟಾಕ್ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಘೋಷಣೆ ಮಾಡಿರುವ ಭಾನುವಾರ ಲಾಕ್ ಡೌನ್ ಉತ್ತಮವಾಗಿದೆ. ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜನ ಇದಕ್ಕೆ ಸ್ಪಂದಿಸಿದ್ದಾರೆ. ಕೊರೊನಾ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ಭಾನುವಾರ ಲಾಕ್ಡೌನ್ ಮಾಡಲಾಗುತ್ತಿದೆ. ಅದಕ್ಕಾಗಿ ಈ ತೀರ್ಮಾನವನ್ನು ಸರ್ಕಾರ ಮಾಡಿದೆ. 1.70 ಲಕ್ಷ ಶ್ರಮಿಕ ಕಾರ್ಮಿಕರನ್ನು ವಿವಿಧ ರಾಜ್ಯಗಳಿಗೆ ಶಾಂತವಾಗಿ ಕಳುಹಿಸಿದ್ದೇವೆ ಎಂದರು.
ಇನ್ನು ಒಡಿಶಾ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದಲ್ಲೇ ತಂಗಿದ್ದಾರೆ. ಅವರನ್ನು ಅವರ ರಾಜ್ಯಕ್ಕೆ ಕಳುಹಿಸಲು ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಅವರ ಜೊತೆ ಮಾತನಾಡಿದ್ದೇನೆ ಎಂದರು.