ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮವಾಗುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಿಂದ ಹೊರ ನಡೆದಿದ್ದಾರೆ. ನೂತನ ಸಿಎಂ ಆಯ್ಕೆಯಿಂದ ಯತ್ನಾಳ್ ಅಸಮಾಧಾನಗೊಂಡಂತೆ ಕಾಣುತ್ತಿದ್ದು, ಮತ್ತೆ ರೆಬಲ್ ನಾಯಕನಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಮುಂದಿನ ಸಿಎಂ ಎಂದು ಅಧಿಕೃತವಾಗುತ್ತಿದ್ದಂತೆ ಹೋಟೆಲ್‌ನಿಂದ ಮೊದಲಿಗರಾಗಿ ಯತ್ನಾಳ್ ಹೊರ ಬಿದ್ದಿದ್ದಾರೆ. ಮಾಧ್ಯಮಗಳು ಮಾತನಾಡಿಸುವ ಪ್ರಯತ್ನ ನಡೆಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಚರಂತಿಮಠ ಜೊತೆ ಮಾತನಾಡುತ್ತಾ ತೆರಳಿದರು. ಇವರು ತೆರಳಿದ ಕೆಲವೇ ಕ್ಷಣಗಳ ಬಳಿಕ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ಹೊರ ನಡೆದರು.
ಇದಾದ ಬಳಿಕ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಇತರೆ ಬಿಜೆಪಿ ನಾಯಕರು ಸಹ ಹೋಟೆಲ್‌ನಿಂದ ನಿರ್ಗಮಿಸಿದರು. ಯಡಿಯೂರಪ್ಪ ಆಪ್ತರಲ್ಲಿ ಒಬ್ಬರಾಗಿರುವ ಬಸವರಾಜ್ ಬೊಮ್ಮಾಯಿ ಆಯ್ಕೆ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಡಿಯೂರಪ್ಪ ಆಡಳಿತ ಹಾಗೂ ಬಿ ವೈ ವಿಜಯೇಂದ್ರ ಹಸ್ತಕ್ಷೇಪ ಮತ್ತು ಸಂಪುಟ ಸದಸ್ಯರ ಸಹಕಾರವನ್ನು ಸದಾ ಖಂಡಿಸುತ್ತಾ ಬಂದಿದ್ದ ನಾಯಕರಿಗೆ ಇದೀಗ ಬಿಎಸ್ವೈ ಆಪ್ತರೇ ಸಿಎಂ ಆಗುತ್ತಿರುವುದು ಇನ್ನಷ್ಟು ಬೇಸರಕ್ಕೆ ಒಳಗಾಗುವಂತೆ ಮಾಡಿದೆ. ಅದಕ್ಕಾಗಿಯೇ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.
ರಾಜ್ಯ ಬಿಜೆಪಿಯ ಹಲವು ಶಾಸಕರಿಗೆ ಹಾಗೂ ಬಿ ಎಸ್ ಯಡಿಯೂರಪ್ಪ ವಿರೋಧಿ ಬಣಕ್ಕೆ ಬಸವರಾಜ್ ಬೊಮ್ಮಾಯಿ ಆಯ್ಕೆ ಸಹಜವಾಗಿಯೇ ಬೇಸರ ತಂದಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವುಗಳನ್ನು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.