ಬೆಂಗಳೂರು : ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕಾವು ಏರುತ್ತಿದೆ. ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಾಸ್ರಬ್ ಆಲಿ ಖಾದ್ರಿ ಪರ ಪಕ್ಷದ ನಾಯಕರು ಏಪ್ರಿಲ್ 3ರಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿ ಜೆಡಿಎಸ್ನ ಹಲವು ನಾಯಕರು ಏಪ್ರಿಲ್ 3ರಿಂದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಯಾಸ್ರಬ್ ಆಲಿ ಖಾದ್ರಿ ಈಗಾಗಲೇ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಉಪಚುನಾವಣೆಯಲ್ಲಿ ಇದೊಂದೇ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಎಲ್ಲ ರೀತಿಯ ಶ್ರಮ ಹಾಕಿ ಪ್ರಚಾರ ನಡೆಸಿ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜೆಡಿಎಸ್ ನಿರ್ಧರಿಸಿದೆ.
ಈ ಉಪಚುನಾವಣೆಯಲ್ಲಿ ಬಸವ ಕಲ್ಯಾಣ ಕ್ಷೇತ್ರದ ಮೇಲೆ ಮಾತ್ರ ಕೇಂದ್ರೀಕರಿಸಿದೆ. ಆ ಕ್ಷೇತ್ರದಲ್ಲೇ ಜೆಡಿಎಸ್ ನಾಯಕರು ನಿರಂತರ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಸುಮಾರು ಎರಡು ವಾರಗಳ ಕಾಲ ಕ್ಷೇತ್ರದಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಈಗಾಗಲೇ ತಿಳಿಸಿದ್ದಾರೆ.