ಬೆಂಗಳೂರು: ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವಿನ ವಾಕ್ಸಮರಕ್ಕೆ ವಿಧಾನಸಭೆ ಸಾಕ್ಷಿಯಾಯಿತು. ಮೈತ್ರಿ ಸರ್ಕಾರ, ಬಸ್, ಬ್ರೇಕ್, ಆಕ್ಸಿಲೇಟರ್, ಸ್ಟೇರಿಂಗ್ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಹಾಗೂ ಶಾಸಕ ಪಿ.ರಾಜೀವ್, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಬರೀ ಸ್ಟೇರಿಂಗ್ ಮಾತ್ರ ತಿರುಗಿಸುತ್ತಿದ್ರು. ಆದರೆ ಸಿದ್ದರಾಮಯ್ಯ ಎಕ್ಸಿಲೇಟರ್ ಹಾಕೋಕೆ ಬಿಡ್ತಾ ಇರಲಿಲ್ಲ, ಬ್ರೇಕ್ ಹಾಕ್ತಿದ್ರು ಅಂತಾ ಆರೋಪಿಸಿದರು.
ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಆಕ್ಸಿಡೆಂಟ್ ಮಾಡಿ ಸರ್ಕಾರ ಕಿತ್ತುಕೊಂಡಿದ್ದು ನೀವು, ಏನು ಮಾಡೋಕೆ ಆಗುತ್ತದೆ ಎಂದು ಕಾಲೆಳೆದರು. ಬಳಿಕ ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇಲ್ಲ. ಹಾಗಾದರೆ ಬ್ರೇಕ್, ಎಕ್ಸಿಲೇಟರ್ ಎಲ್ಲಾ ಯಡಿಯೂರಪ್ಪ ಅವರ ಕೈಯಲ್ಲಿ ಇದೆಯಾ? ಕೋಮುವಾದಿ ಬಿಜೆಪಿ ಆಡಳಿತಕ್ಕೆ ಬರಬಾರದು ಎಂದು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಹಾಗಾದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ, ನಾನು ಬ್ರೇಕ್, ಎಕ್ಸಿಲೇಟರ್ ಹಾಕ್ತಿದ್ನಾ ಎಂದು ಪ್ರಶ್ನಿಸಿದರು.
ನೀವು ಹೀಗೆ ಮಾತನಾಡುವುದು ಸರಿಯಲ್ಲ. ನೀವು ಈಗ ಬಿಜೆಪಿಗೆ ಹೋಗಿದ್ದೀರಾ. ಈ ಹಿಂದೆ ಬಿಜೆಪಿಯಲ್ಲಿ ಇರಲಿಲ್ಲ. ಏನು ಯಡಿಯೂರಪ್ಪ ಅವರ ಕೈಯಲ್ಲಿ ಇಂಜಿನ್ ಇದೆಯಾ? ಯಡಿಯೂರಪ್ಪ ಅವರು 17 ಜನರನ್ನು ಸೀಕ್ರೆಟ್ ಆಪರೇಷನ್ ಮೂಲಕ ಕರೆತಂದು ಸರ್ಕಾರ ರಚಿಸಿದ್ದು ಅಲ್ವಾ? ಜನರ ಆಶೀರ್ವಾದದಿಂದ ಸರ್ಕಾರ ರಚಿಸಿದವರು ನೀವಲ್ಲ. ಜನರ ಆಶೀರ್ವಾದ ನಿಮಗಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ನೀವು ಶಾಸಕರಾಗಿರಲಿಲ್ಲ. ಯಾವುದೋ ನಿಗಮದ ಅಧ್ಯಕ್ಷರಷ್ಟೇ ಆಗಿದ್ರಿ. ಹೊಗಳೋದಿಕ್ಕೆ ಮುಖ್ಯಮಂತ್ರಿಗಳು ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ? ಎಂದು ರಾಜೀವ್ಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವಧಿಯ ಬಜೆಟ್ ಬಗ್ಗೆ ಪ್ರಸ್ತಾಪ ಮಾಡಿದ ಪಿ.ರಾಜೀವ್, ಸಿದ್ದರಾಮಯ್ಯ 2017-18ರ ಬಜೆಟ್ನಲ್ಲಿ ಎರಡೂವರೆ ಲಕ್ಷ ಮನೆ ಕಟ್ಟಿರೋದಾಗಿ ಹೇಳಲಾಗಿದೆ. ಕಾಂಗ್ರೆಸ್ ಸುಳ್ಳು ಲೆಕ್ಕ ನೀಡಿದೆ. ಸಿದ್ದರಾಮಯ್ಯ ಅವರು ಅಷ್ಟು ಮನೆಗಳನ್ನು ಕಟ್ಟಿಸಿಲ್ಲ ಎಂದು ನಾನು ಕಾಂಗ್ರೆಸ್ಗೆ ಓಪನ್ ಚಾಲೆಂಜ್ ಮಾಡುತ್ತೇನೆ ಎಂದು ಸವಾಲು ಹಾಕಿದರು.
ರಾಜೀವ್ ಚಾಲೆಂಜ್ಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಏನು ಚಾಲೆಂಜ್ ಮಾಡೋದು ನೀವು? ಚಾಲೆಂಜ್ ಮಾಡೋದಾದ್ರೆ ಜನರ ಬಳಿ ಹೋಗೋಣ ಬನ್ನಿ. ಜನರ ಬಳಿ ಹೋಗೋಣ ಚಾಲೆಂಜ್ ಒಪ್ಕೋತೀರಾ? ಎಂದು ಮರು ಸವಾಲು ಹಾಕಿದರು.