ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಪತ್ರಿಕಾ ಪ್ರಕಟಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ, ಇದು ದಲಿತ ವಿರೋಧಿ, ಮಹಿಳಾ ವಿರೋಧಿ ಮತ್ತು ಸಂವಿಧಾನಾತ್ಮಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿ ಕ್ರಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸ್ಪಷ್ಟನೆ ಹೊರಡಿಸಿರುವ ಅವರು, ಮುಖ್ಯಮಂತ್ರಿಯವರು ತಮ್ಮ ಸಚಿವರ ಮಾಹಿತಿ ಆಧರಿಸಿ ನಿನ್ನೆ ಪಠ್ಯ ಪರಿಷ್ಕರಣೆ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಆದರೆ ಪ್ರತಿರೋಧಿಸುತ್ತಿರುವ ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಕರೆದು ಮಾತಾಡಿ ತೀರ್ಮಾನಕ್ಕೆ ಬರುವುದು ಪ್ರಜಾಸತ್ತಾತ್ಮಕ ಸರ್ಕಾರದ ಜವಾಬ್ದಾರಿ. ಆದ್ದರಿಂದ ಇಲ್ಲದಿದ್ದರೆ ಏಕಪಕ್ಷೀಯವಾಗುತ್ತದೆ. ಮುಖ್ಯಮಂತ್ರಿಗಳು ಮರುಪರಿಷ್ಕರಣೆ ವಿರೋಧಿಸುತ್ತಿರುವವರನ್ನು ಮಾತುಕತೆಗೆ ಆಹ್ವಾನಿಸಬೇಕೆಂದು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ಬಸವಣ್ಣನ ವಿಚಾರದ ಬಗ್ಗೆ ಸ್ಪಷ್ಟನೆ ಏನು?: ತಮ್ಮ ಸ್ಪಷ್ಟನೆಯಲ್ಲಿ ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಕೆಲವು ಅಂಶಗಳಿಗೆ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ಮತ್ತು ನಾಡಿನ ಇತರೆ ಸ್ವಾಮೀಜಿಯವರು ಬಸವಣ್ಣನವರ ವಿಷಯದಲ್ಲಿ ಎತ್ತಿದ ಪ್ರಶ್ನೆಗೆ 'ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯ ಅಂಶಗಳಿವೆ' ಎಂದಿದ್ದಾರೆ.
ಆದರೆ ವಾಸ್ತವದಲ್ಲಿ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿ ನಾವು ಅಳವಡಿಸಿದ್ದ ವಿವರಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮರುಪರಿಷ್ಕರಣೆಯಲ್ಲಿ ಉಳಿಸಿಕೊಂಡಿದ್ದರೂ, 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿದ್ದ ಬಸವಣ್ಣನವರ ವಿವರಗಳಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಬಿಡಲಾಗಿದೆ. ಮರುಪರಿಷ್ಕರಣೆಯ ಪಠ್ಯದಲ್ಲಿ ಬಸವಣ್ಣನವರು ವೈದಿಕ ಮೂಲ ಮೌಲ್ಯಾಚರಣೆಗಳನ್ನು ವಿರೋಧಿಸಿದ್ದು, ಯಜೇಪವೀತವನ್ನು ಕಿತ್ತೆಸೆದದ್ದು, ಉನ್ನತಾಧಿಕಾರದಲ್ಲಿದ್ದರೂ ಚಳವಳಿ ಕಟ್ಟಿದ್ದು, 'ದೇಹವೇ ದೇಗುಲ' ಎಂಬ ಹೊಚ್ಚ ಹೊಸ ಪರಿಕಲ್ಪನೆ ನೀಡಿದ್ದು, ಜನಸಾಮಾನ್ಯರಿಗೆ ತಲುಪುವ ಸರಳ ಕನ್ನಡದಲ್ಲಿ ವಚನಕಾರರು ಬರೆದದ್ದು-ಮುಂತಾದ ವಿಷಯಗಳನ್ನು ಮರುಪರಿಷ್ಕರಣೆಯಲ್ಲಿ ಬಿಡಲಾಗಿದೆ. ನಾವು ಪರಿಷ್ಕರಣೆ ಮಾಡಿದಾಗ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕಕ್ಕೆ 'ಬಸವಣ್ಣನವರ ಜೀವನ ದರ್ಶನ' ಕುರಿತ ಹೊಸ ಪಾಠವನ್ನು ಸೇರಿಸಿದ್ದೆವು ಎಂದು ವಿವರಿಸಿದ್ದಾರೆ.
ಕುವೆಂಪು ಅವರ ಅಪೂರ್ವ ಸಾಧನೆಗೆ ಚ್ಯುತಿ ಮಾಡಿಲ್ಲ: ರಾಷ್ಟ್ರಕವಿ ಕುವೆಂಪು ಅವರ ಹತ್ತು ರಚನೆಗಳು ಮರುಪರಿಷ್ಕರಣೆಯ ಒಟ್ಟು ಕನ್ನಡ ಭಾಷಾ ಪಠ್ಯಗಳಲ್ಲಿ ಇರುವುದು ನಿಜ. ನಾವು ಪರಿಷ್ಕರಣೆ ಮಾಡಿದಾಗ ಮೂಲ ಪಠ್ಯಪುಸ್ತಕದಲ್ಲಿ ಇಲ್ಲದ ಕೆಲವು ಮುಖ್ಯ ಸಾಹಿತಿಗಳ ಪಾಠ ಸೇರಿಸುವುದಕ್ಕಾಗಿ ಸಾಮಾನ್ಯ ಮಾನದಂಡವನ್ನು ರೂಪಿಸಿಕೊಂಡೆವು ಎಂದಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಅಪೂರ್ವ ಸಾಧನೆಗೆ ಚ್ಯುತಿಯುಂಟು ಮಾಡದೆ, ಮೂಲ ಪಠ್ಯಪುಸ್ತಕಗಳಲ್ಲಿ ಇಲ್ಲದೆ ಇದ್ದ, ಕಲ್ಯಾಣ ಕರ್ನಾಟಕದ ಸಿಂಪಿ ಲಿಂಗಣ್ಣ, ಶಾಂತರಸ, ಚೆನ್ನಣ್ಣ ವಾಲೀಕಾರ ಅವರಲ್ಲದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕೆಲವು ಲೇಖಕಿಯರ ಪಾಠಗಳನ್ನು ಸೇರಿಸಿದೆವು. ಈ ನಮ್ಮ ನಡೆಯು ಕುವೆಂಪು ಅವರ ಅಖಂಡ ಕರ್ನಾಟಕ ಪರಿಕಲ್ಪನೆ ಮತ್ತು ಸಾಮಾಜಿಕ ನ್ಯಾಯ ಕಲ್ಪನೆಗೆ ಅನುಗುಣವಾಗಿತ್ತು. ಕುವೆಂಪು ಅವರ ಬಗ್ಗೆ ಮುಖ್ಯಮಂತ್ರಿಯವರು ನೀಡಿದ ಸಂಖ್ಯಾ ಮಾಹಿತಿಯಿಂದ, ನಾಡಗೀತೆ, ನಾಡಧ್ವಜ, ಕನ್ನಡ ಭಾಷೆಗಳಿಗೆ ಮಾಡಿದ ಅವಮಾನಕ್ಕೆ ಖಂಡಿತ ರಿಯಾಯಿತಿ ಸಿಗುವುದಿಲ್ಲ ಎಂದಿದ್ದಾರೆ.
ಕೆಂಪೇಗೌಡರ ಆಳ್ವಿಕೆ ವಿವರ ಕಡಿತ: ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ಮುಖ್ಯಮಂತ್ರಿಯವರು ಹೊಸದಾಗಿ ಪಾಠ ಸೇರಿಸಿರುವುದಾಗಿ ಹೇಳಿದ್ದಾರೆ. ವಾಸ್ತವವೆಂದರೆ, 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿ 'ಯಲಹಂಕ ನಾಡಪ್ರಭುಗಳು' ಎಂಬ ಪಾಠವನ್ನು ನಮ್ಮ ಪರಿಷ್ಕರಣೆಯ ಕಾಲದಲ್ಲೇ ಸೇರಿಸಿದ್ದೇವೆ. ಕೆಂಪೇಗೌಡರ ವಂಶಾವಳಿ ಮತ್ತು ಆಳ್ವಿಕೆಯ ವಿವರಗಳನ್ನು ನೀಡಿದ್ದೇವೆ. ಆದರೆ ಮರುಪರಿಷ್ಕರಣೆಯಲ್ಲಿ ನಾವು ಕೊಟ್ಟಿದ್ದ ವಿವರಗಳನ್ನು ಕಡಿತ ಮಾಡಲಾಗಿದೆ ಎಂದು ಬರಗೂರು ಹೇಳಿದ್ದಾರೆ.
ಜೊತೆಗೆ ಯಲಹಂಕ ನಾಡಪ್ರಭುಗಳ ಆಳ್ವಿಕೆಯ ವಿಸ್ತೀರ್ಣವನ್ನು ಬೆಂಗಳೂರು ಜಿಲ್ಲೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಬೆಂಗಳೂರು, ರಾಮನಗರ, ತುಮಕೂರು, ಅವಿಭಜಿತ ಕೋಲಾರ ಜಿಲ್ಲೆಗಳು ಕೂಡ ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದನ್ನು ವಿವರಿಸಲಾಗಿತ್ತು. ಇದನ್ನು ಮರುಪರಿಷ್ಕರಣೆಯಲ್ಲಿ ಬಿಟ್ಟಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ತಿಳಿಸಿರುವ ಹೊಸ ಪಾಠವನ್ನು ಎಲ್ಲಿ ಸೇರಿಸಿದ್ದಾರೆಂದು ಸ್ಪಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯಸಮ್ಮತ ಮಾನದಂಡ ಕಂಡಿಲ್ಲ: ಪರಿಷ್ಕರಣೆ ಎಂದಾಗ ಕೆಲವನ್ನು ಬಿಡುವುದು ಮತ್ತು ಸೇರಿಸುವುದು ಇರುತ್ತದೆ. ಆದರೆ ಈ ಕ್ರಿಯೆಗೆ ನ್ಯಾಯಸಮ್ಮತ ಮಾನದಂಡವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಂಥದೊಂದು ನ್ಯಾಯಸಮ್ಮತ ಮಾನದಂಡವು ಮರುಪರಿಷ್ಕರಣೆಯಲ್ಲಿ ಕಾಣಿಸುವುದಿಲ್ಲ. ಕನ್ನಡ ಭಾಷಾ ಪಠ್ಯಗಳಲ್ಲಿ ದೇವನೂರರನ್ನು ಹೊರತುಪಡಿಸಿ ಎಲ್ಲಾ ದಲಿತ ಮೂಲದ ಸಾಹಿತಿಗಳ ರಚನೆಗಳನ್ನು ತೆಗೆಯಲಾಗಿದೆ. ಬಹುಪಾಲು ಮಹಿಳಾ ಸಾಹಿತಿಗಳ ರಚನೆಗಳನ್ನು ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಬುದ್ಧ, ಅಂಬೇಡ್ಕರ್ ಅಂಥವರ ವಿಷಯ ವಸ್ತುವುಳ್ಳ ಕವನಗಳನ್ನು ಕೈಬಿಡಲಾಗಿದೆ. 6ನೇ ತರಗತಿಯ ಸಮಾಜ ವಿಜ್ಞಾನದಿಂದ ಬೌದ್ಧಧರ್ಮ ಮತ್ತು ಜೈನಧರ್ಮದ ವಿವರಗಳನ್ನು ತೆಗೆಯಲಾಗಿದೆ. ನಾವು ಹೊಸದಾಗಿ ಸೇರಿಸಿದ್ದ ಸಾವಿತ್ರಿಬಾಯಿ ಫುಲೆ ಮುಂತಾದ ಸುಧಾರಕಿಯರ ಪಾಠಕ್ಕೆ ಕೊಕ್ ಕೊಡಲಾಗಿದೆ. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ, ನಾಸಿಕ್ ದೇವಾಲಯ ಪ್ರವೇಶದಂತಹ ಅನೇಕ ಸಾಲುಗಳು ಮರುಪರಿಷ್ಕರಣೆಯಲ್ಲಿ ಇಲ್ಲವಾಗಿವೆ.
ನಾವು ಸೇರಿಸಿದ್ದ ನಾರಾಯಣ ಗುರು ಕುರಿತ ಪಾಠವನ್ನು ಬಿಟ್ಟಿದ್ದು ಮತ್ತೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಇಲ್ಲಿ ತೆಗೆದದ್ದು, ಸೇರಿಸಿದ್ದು ಯಾರನ್ನು ಮತ್ತು ಎಂಥ ಪಾಠವನ್ನು ಎಂಬುದನ್ನು ಪರಿಶೀಲಿಸಬೇಕು. ಈ ಎಲ್ಲ ಅಂಶಗಳ ಆಧಾರದ ಮೇಲೆ ಹೇಳುವುದಾದರೆ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಗೌಣವಾಗಿದೆ. ಅಷ್ಟೇ ಅಲ್ಲ, ಬಸವಣ್ಣ, ಕುವೆಂಪು ಅವರ ಆದರ್ಶಕ್ಕೂ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುಗಾದ ಅವಮಾನ ಖಂಡಿಸಿ ನಡೆಸುವ ಪಾದಯಾತ್ರೆ ಕೈಬಿಡಲ್ಲ: ಕಿಮ್ಮನೆ ರತ್ನಾಕರ್