ಬೆಂಗಳೂರು: ಬಂಟರ ಹೊಟೇಲ್ ಮಾಲೀಕರ ಸಂಘವು ಸೆಪ್ಟಂಬರ್ 8 ರಂದು ನಗರದ ಬಂಟರ ಸಂಘದ ಭವನದಲ್ಲಿ 'ಬಂಟರಾತಿಥ್ಯ' ಬಂಟ್ಸ್ ಹೊಟೇಲ್ ಉದ್ದಿಮೆದಾರರ ಪ್ರಥಮ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದೆ.
ಇಂದು ಬಂಟರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರು ನಗರದ ಪ್ರೆಸ್ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ರು.
ಈ ವೇಳೆ ಮಾತನಾಡಿದ ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಬಂಟರಾತಿಥ್ಯ ಅನ್ನೋದು ವಿಶಿಷ್ಟ ಕಾರ್ಯಕ್ರಮವಾಗಿದೆ. ಇಲ್ಲಿ ಹೊಟೇಲ್ ಉದ್ಯಮದ ಬಗ್ಗೆ ಯುವ ಉದ್ಯಮಿಗಳಿಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಸೆ.8 ರಂದು ಬೆಂಗಳೂರಿನ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಹೊಟೇಲ್ ಉದ್ಯಮಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ಅಲ್ಲದೇ, 'ಕುರುಕ್ಷೇತ್ರಕ್ಕೊಂದು ಆಯೋಗ' ಅನ್ನೋ ಯಕ್ಷ ಪ್ರಯೋಗ ಕಾರ್ಯಕ್ರಮ, 'ಎಲ್ಲಾ ಸಮಾ ಅತ್ತು' ಎಂಬ ಕುಂದಾಪುರ ಕನ್ನಡ ಹಾಸ್ಯ ನಾಟಕವೂ ನಡೆಯಲಿದೆ. ಇನ್ನು ಸಂತೋಷ್ ಕುಮಾರ್ ಹೆಗ್ಡೆ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಬಂಟರಾತಿಥ್ಯ ಕಾರ್ಯಕ್ರಮದ ಬಗ್ಗೆ ಈ ವೇಳೆ ಮಾಹಿತಿ ನೀಡಿದ್ರು.
ಸಂಜೆ 5 ಗಂಟೆಗೆ ಬಂಟರಾತಿಥ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿ ಡಾ. ನಿರ್ಮಲಾನಂದ ಸ್ವಾಮೀಜಿಯವರ ನೇತೃತ್ವದ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಚಿವರಾದ ಡಾ. ಸಿ. ಅಶ್ವಥ್ನಾರಾಯಣ, ವಿ. ಸೋಮಣ್ಣ, ಸಿ.ಟಿ. ರವಿ, ಎಂಆರ್ಜೆ ಗ್ರೂಪ್‍ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದಾರೆ ಮಧುಕರ್ ಶೆಟ್ಟಿ ತಿಳಿಸಿದರು.