ಬೆಂಗಳೂರು : ಮಾನವೀಯತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉಪಚಾರಕ್ಕೆ ಪ್ರತಿಯಾಗಿ ಏನೇ ನೀಡಿದರೂ ಅದು ಅಲ್ಪವೇ. ಯಾಕೆಂದರೆ ಬೆಂಗಳೂರಿನ ಒಲ್ಡ್ ಏರ್ಪೋರ್ಟ್ ಸಂಚಾರಿ ಪೊಲೀಸರ ಈ ಸಹಾಯ, ಮಾನವೀಯತೆಗೆ ಬೆಲೆ ಕಟ್ಟಲಾಗದು. ಹೌದು, ಕಣ್ರೀ ಮಾನವೀಯ ಸಂಬಂಧ ಕಣ್ಮರೆಯಾಗುತ್ತಿರುವ ಇಂತಹ ಪರಿಸ್ಥಿತಿಯಲ್ಲೂ ಗೊತ್ತು-ಗುರಿಯಿಲ್ಲದ ಪರಿಚಯವೇ ಇಲ್ಲದ ವ್ಯಕ್ತಿ ಅಪಘಾತದಿಂದ ನರಳಾಡುತ್ತಿದ್ದಾಗ ಆತನನ್ನು ಆಸ್ಪತ್ರೆಗೆ ಸೇರಿಸಿ ಬೆಂಗಳೂರಿನ ಒಲ್ಡ್ ಏರ್ ಪೋರ್ಟ್ ಸಂಚಾರಿ ಪೊಲೀಸರು ಮನುಷ್ಯತ್ವ ಮೆರೆದಿದ್ದಾರೆ.
ಕಳೆದ ಆಗಸ್ಟ್ 16 ರಂದು ಮಾರತ್‌ಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್ ಎಂಬುವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ. ಸಂಜಯ್ ನನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಂಚಾರಿ ಪೊಲೀಸರು ದೌಡಾಯಿಸಿ ನೆರವಿನ ಹಸ್ತ ಚಾಚಿಸಿದ್ದಾರೆ.
ಸಂಜಯ್‌ರನ್ನು ಕೂಡಲೇ ಚಿಕಿತ್ಸೆಗಾಗಿ ಪೊಲೀಸರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟಾಗಿ ಕೋಮಾಗೆ ಹೋಗಿದ್ದ ಈತನಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದು, ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ತಕ್ಷಣವೇ ನಿಮ್ಹಾನ್ಸ್‌ಗೆ ಕರೆದೊಯ್ದು ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿದ್ದಾರೆ.
ಆಪರೇಷನ್ ಬಳಿಕ 15 ದಿನಗಳ ವರೆಗೂ ಸಂಜಯ್ ಕೋಮಾ ಸ್ಥಿತಿಯಲ್ಲೇ ಇದ್ದು ನಂತರ ಪ್ರಜ್ಞೆ ಬಂದಿದೆ. ಬಳಿಕ ಈತನ ಹಿನ್ನೆಲೆ ಕಲೆಹಾಕಿದಾಗ ಸಂಜಯ್ ಮಹಾರಾಷ್ಟ್ರ ಮೂಲದವನಾಗಿದ್ದು, ನಗರದಲ್ಲಿ ಗಾರೆ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಒಂದು ತಿಂಗಳವರೆಗೂ ಪಾಳಿಯಂತೆ ಕಾನ್‌ಸ್ಟೇಬಲ್ ಗಳಾದ ಕಾಶಪ್ಪ, ಚಿರಂಜೀವಿ ಹಾಗೂ ಶ್ರೀಕಾಂತ್ ಇನ್ನಿತರ ಸಿಬ್ಬಂದಿ ಈತ ಗುಣಮುಖನಾಗುವವರೆಗೂ ಉಪಚರಿಸಿದ್ದಾರೆ. ಬಳಿಕ ಸೆ.19 ರಂದು ಡಿಸ್ಚಾರ್ಜ್ ಆದ ಬಳಿಕ ಬಸ್ ಚಾರ್ಜ್ ನೀಡಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.. ಪೊಲೀಸರ ಮಾನವೀಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಸದ್ಯ ಅಪಘಾತಕ್ಕೆ ಕಾರಣವಾದ ಸವಾರ ಬೈಕ್ ಬಿಟ್ಟು ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬೈಕ್ ನೋಂದಣಿ ಸಂಖ್ಯೆ ಫೇಕ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ಚನ್ನೇಶ್ ನೇತೃತ್ವದ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಪಾತ್ರವಾಗಿದೆ. ಕಷ್ಟ ಕಾಲದಲ್ಲಿ ಸ್ಪಂದಿಸಿದ್ದಕ್ಕೆ ಚೇತರಿಸಿಕೊಂಡ ಗಾಯಾಳು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.