ಬೆಂಗಳೂರು: ಬಸವೇಶ್ವರ ನಗರದ ಶಂಕರಮಠದ ಬಳಿಯ ಮನೆಯೊಂದರಲ್ಲಿ ಬಟ್ಟೆ, ಸೌಂದರ್ಯವರ್ಧಕ ಸಾಮಗ್ರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಮನೆಗೆ ಸಂಘಟಕರ ಸೋಗಿನಲ್ಲಿ ನುಗ್ಗಿದ ದರೋಡೆಕೋರರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಆರು ಮಂದಿಯ ಗ್ಯಾಂಗ್‍ವೊಂದನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಇದೀಗ ಬಂಧಿಸಿದ್ದಾರೆ.
ಜ್ಞಾನಭಾರತಿಯ ದೀಪಾ, ಅನಿತಾ, ನಂದಿನಿ ಲೇಔಟ್ ಹಾಗೂ ಪೀಣ್ಯದ ವಿಜಯಾ, ನವೀನ್, ಚಂದ್ರಶೇಖರ್, ಮಾಹಾಲಿಂಗಯ್ಯ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮಹಿಳಾ ಆರೋಪಿಯ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಆರೋಪಿಗಳಿಂದ 152 ಗ್ರಾಂ ಚಿನ್ನಾಭರಣ, 63 ಸಾವಿರ ರೂ. ನಗದು, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಸೌಂದರ್ಯವರ್ಧಕ ಅಂಗಡಿ ಮಾಲೀಕ ಜಗದೀಶ್ ಎಂಬುವರಿಂದ ಸಾಮಗ್ರಿ ಖರೀದಿಸುತ್ತಿದ್ದ ಅಂಜು ಜೆಸ್ವಾನಿ (56) ಬಸವೇಶ್ವರ ನಗರದ ತಮ್ಮ ಮನೆಯಲ್ಲಿ ಬಟ್ಟೆ, ಸೌಂದರ್ಯವರ್ಧಕ ಸಾಮಗ್ರಿ ಇಟ್ಟುಕೊಂಡು ಅಕ್ಕಪಕ್ಕದ ಮನೆಯ ಪರಿಚಯಸ್ಥರಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕೆಂಗೇರಿ ನಿವಾಸಿ ಸುಜಾತ ಎಂಬುವವರು ಇವರ ಪರಿಚಿತ ಗ್ರಾಹಕರಾಗಿದ್ದರು. ಹಾಗಾಗಿ, ಇವರು ತಮ್ಮ ಪರಿಚಯಸ್ಥರಿಗೆ ಅಂಜು ಜೆಸ್ವಾನಿ ಮನೆಯಲ್ಲೇ ಸೌಂದರ್ಯವರ್ಧಕ ವಸ್ತು ಕೊಳ್ಳುವಂತೆ ತಿಳಿಸುತ್ತಿದ್ದರು. ಅದರಂತೆ, ಅಂಜು ಮನೆಯಲ್ಲಿ ಉತ್ತಮ ಸೌಂದರ್ಯವರ್ಧಕ ಸಾಮಗ್ರಿ ದೊರೆಯುತ್ತಿದ್ದು, ಬೇಕಾದಲ್ಲಿ ಖರೀದಿಸಬಹುದು ಎಂದು ಸುಜಾತ ಜ್ಞಾನಭಾರತೀಯ ದೀಪಾರಿಗೆ ಅಂಜು ಅವರ ಮೊಬೈಲ್ ನಂಬರ್ ನೀಡಿದ್ದರು.
ಅಂಜು ಮನೆಯ ಬಗ್ಗೆ ಮಾಹಿತಿ ಪಡೆದಿದ್ದ ದೀಪಾ ದರೋಡೆ ಮಾಡಲು ತನ್ನ ಸಹಚರರ ಜತೆ ಸೇರಿ ಸಂಚು ರೂಪಿಸಿದ್ದಳು. ಡಿಸೆಂಬರ್ 12 ರಂದು ಅಂಜು ಹೂವು ಖರೀದಿಸಲು ಹೊರಗೆ ಹೋಗಿರುತ್ತಾರೆ. ಮನೆಯಲ್ಲಿ ಅಂಜು ಪರಿಚಯಸ್ಥ ಜಗದೀಶ್ ಇರುತ್ತಾನೆ. ಈ ವೇಳೆ, ಗ್ರಾಹಕರ ಸೋಗಿನಲ್ಲಿ ದೀಪಾ ಅಂಜು ಮನೆಗೆ ತೆರಳುತ್ತಾಳೆ. ಇದರ ಹಿಂದೆಯೇ ಆರು ಜನರ ತಂಡವೊಂದು ಮನೆಯೊಳಗೆ ನುಗ್ಗಿದೆ.
ಇದನ್ನೂ ಓದಿರಿ: ನಿಯಂತ್ರಣ ತಪ್ಪಿ ಕಾಲೇಜ್ ವಿದ್ಯಾರ್ಥಿನಿಗೆ ಗುದ್ದಿದ ಕಾರು... ಸಿಸಿಟಿವಿ ವಿಡಿಯೋ
ದೀಪಾ ಹಾಗೂ ಜಗದೀಶ್ ಒಟ್ಟಿಗೆ ಇರುವುದನ್ನು ಪ್ರಶ್ನಿಸಿ ಎಷ್ಟು ದಿನಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಿರಾ? ಎಂದು ಪ್ರಶ್ನಿಸುತ್ತಾರೆ. ಅಷ್ಟೋತ್ತಿಗೆ ಅಂಜು ಮನೆಗೆ ಬರುತ್ತಾರೆ. ದರೋಡೆಕೋರರ ತಂಡ, ಜಗದೀಶ್ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದು, ಮನೆಯ ಕೆಳಗಡೆ ಪೊಲೀಸರು ಮತ್ತು ಮಾಧ್ಯಮದವರು ಇದ್ದಾರೆ. ಅವರಿಗೆ ವಿಡಿಯೋ ನೀಡಿ ನಿಮ್ಮ ಗೌರವ ಕಳೆಯುತ್ತೇವೆ. ಇದು ಬೇಡವೆಂದರೆ ಐದು ಲಕ್ಷ ರೂ. ನೀಡಬೇಕೆಂದು ಹೆದರಿಸುತ್ತಾರೆ. ಅಲ್ಲದೇ, ಜಗದೀಶ್ ಅವರಿಂದ ಮೊಬೈಲ್ ಕಿತ್ತುಕೊಂಡು ಫೋನ್ ಪೇನಲ್ಲಿ 25 ಸಾವಿರ ರೂ. ಹಣವನ್ನು ತಮ್ಮ ಖಾತೆಗೆ ಕಳುಹಿಸಿಕೊಳ್ಳುತ್ತಾರೆ. ಜತೆಗೆ 1.75 ಲಕ್ಷ ರೂ ನಗದು 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗುತ್ತಾರೆ. ಕೂಡಲೇ ಈ ಸಂಬಂಧ ಅಂಜು ಬಸವೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ.
ಆರೋಪಿಗಳ ಪತ್ತೆ: ಪ್ರಕರಣ ದಾಖಲಿಸಿಕೊಂಡ ಠಾಣಾ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸುತ್ತಾರೆ. ಅಲ್ಲದೇ. ಜಗದೀಶ್ ಮೊಬೈಲ್‍ನಲ್ಲಿ ಯಾವ ಖಾತೆಗೆ ಹಣ ಕಳುಹಿಸಿಕೊಂಡಿದ್ದಾರೆಂಬುದನ್ನ ಪತ್ತೆ ಹಚ್ಚುತ್ತಾರೆ. ಅಕ್ಕಪಕ್ಕದ ಕಟ್ಟಡಗಳು, ರಸ್ತೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.