ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣ ಒಂದೊಂದು ತಿರುವು ಪಡೆಯುತ್ತಿದ್ದು, ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಅವರ ಪಿಎ ಅರುಣ್ ಸಿಸಿಬಿ ವಶದಲ್ಲಿದ್ದು, ಇಂದು ಕಸ್ಟಡಿ ಅಂತ್ಯವಾಗಿ ಸಿಸಿಬಿ ಪೊಲೀಸರು ಮತ್ತೆ ಬಾಡಿ ವಾರೆಂಟ್ ಮೂಲಕ ವಾಪಸ್ ಪಡೆಯುವ ಸಾಧ್ಯತೆ ಇದೆ. ಸದ್ಯ ತನಿಖಾಧಿಕಾರಿಗಳು ಅರುಣ್ ಬಳಿಯಿಂದ ಸಾಕಷ್ಟು ಮಾಹಿತಿ ಪಡೆದಿದ್ದಾರೆ ಹಾಗೆ ಸಿಸಿಬಿ ಅಧಿಕಾರಿಗಳೆ ತನಿಖೆ ವೇಳೆ ಕಕ್ಕಾಬಿಕ್ಕಿಯಾಗಿದ್ದಾರೆ.
ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕೈ ಕಾರ್ಪೊರೇಟರ್ಗಳ ಹೆಸರು ಕೇಳಿಬಂದ ಕಾರಣ ಬೆಂಗಳೂರು ಮಾಜಿ -ಮೇಯರ್ ಸಂಪತ್ ಅವರ ಪಿಎ ಅರುಣ್ ನನ್ನ ವಶಕ್ಕೆ ಪಡೆಯಲಾಗಿತ್ತು. ಈತ ಗಲಭೆಕೋರರ ಜೊತೆ ವಾಟ್ಸ್ಆ್ಯಪ್ ಕಾಲ್ ಹಾಗೆ ಗಲಭೆಕೊರರಿಗೆ ದುಡ್ಡು ಹಂಚುವ ಆರೋಪ ಈತನ ಮೇಲಿದೆ. ಸದ್ಯ ತನಿಖಾಧಿಕಾರಿಗಳು ಈತನನ್ನ ವಿಚಾರಣೆಗೆ ಒಳಪಡಿಸಿದಾಗ ತನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾನೆ. ಆದರೆ ಸಿಸಿಬಿ ಪೊಲೀಸರು ಸಾಕ್ಷ್ಯ ಸಮೇತ ತನಿಖೆ ನಡೆಸುತ್ತಿದ್ದಾರೆ.
ಇನ್ನು ಅರುಣ್ ಮೊಬೈಲ್ನಲ್ಲಿ ಡಿಸಿಪಿ ಸಿಸಿಬಿ ರವಿಕುಮಾರ್ ಪರಿಶೀಲನೆ ಮಾಡಿದಾಗ ಶಾಕ್ ಆಗಿದ್ದಾರೆ. ಅದೇನೆಂದರೆ ಅರುಣ್ ಮೊಬೈಲ್ ನಲ್ಲಿ 50-60 ಕ್ಕೂ ಹೆಚ್ಚು ಹುಡುಗಿಯರ ಫೋಟೊಗಳಿವೆ. ಹಾಗೆ ಇದರ ಬಗ್ಗೆ ಮಾಹಿತಿ ಕೇಳಿದಾಗ ಇದು ನನ್ನ ವೈಯಕ್ತಿಕ ಅನ್ನೋ ಉತ್ತರ ನೀಡಿದ್ದಾನೆ. ಆತನ ಹಿನ್ನೆಲೆ ನೋಡಿದಾಗ ಮದುವೆಯಾದ ಒಂದೇ ತಿಂಗಳಿನಲ್ಲಿ ಹೆಂಡತಿಗೆ ಡಿವೋರ್ಸ್ ಕೊಟ್ಟ ವಿಚಾರ ಕೂಡ ತನಿಖೆಯಲ್ಲಿ ಬಯಲಾಗಿದೆ.
ಸದ್ಯ ಸಿಸಿಬಿ ಪೊಲೀಸರು ಅರುಣ್ ಜಾತಕ ಜಾಲಾಡ್ತಿದ್ದಾರೆ. ಈತನ ಮಾಹಿತಿಯ ಆಧಾರದ ಮೇರೆಗೆ ಹಾಗೆ ಸಾಕ್ಷ್ಯಗಳನ್ನ ಇಟ್ಟುಕೊಂಡು ಸಿಸಿಬಿ ಅಧಿಕಾರಿಗಳು ಮಾಜಿ ಮೇಯರ್ ಸಂಪತ್ ಅವರನ್ನ ವಿಚಾರಣೆಗೆ ಕರೆಸಲು ನಿರ್ಧಾರ ಮಾಡಿದ್ದಾರೆ.
ಅರುಣ್ ಹಿನ್ನೆಲೆ:
ಮೂಲತ ತಮಿಳುನಾಡಿನ ಹೂಸೂರು ಭಾಗದ ಈತ ಬೆಂಗಳೂರಿನ ಮೇಯರ್ ಆಗಿದ್ದ ಸಂಪತ್ ರಾಜ್ ಸಂಬಂಧಿಕ ಕೂಡ. ಕಳೆದ ಒಂಬತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬಂದವನು ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡ್ತಾ ಸಂಪತ್ ರಾಜ್ ವ್ಯವಹಾರವನ್ನ ಎಲ್ಲ ಈತನೆ ನೋಡಿಕೊಳ್ಳುತ್ತಿದ್ದ. ಸದ್ಯ ಈತ ಐಷಾರಾಮಿ ಕಾರು, ಆಸ್ತಿ ಎಲ್ಲವನ್ನ ಹೊಂದಿದ್ದಾನೆ. ಗಲಭೆ ನಡೆದ ಪ್ರಮುಖ ಆರೋಪಿಗಳ ಜೊತೆ ಅರುಣ್ ನಿರಂತರ ಸಂಪರ್ಕದಲ್ಲಿದ್ದ. ಸಿಸಿಬಿ ಟೆಕ್ನಿಕಲ್ ಟೀಂನಿಂದ ಇದು ಸಾಬೀತಾಗಿದ್ದು, ಸದ್ಯ ಅರುಣ್ ಬಳಿಯಿಂದ ಪ್ರತಿಯೊಂದು ಮಾಹಿತಿ ಕಲೆ ಹಾಕ್ತಿದ್ದಾರೆ.