ಬೆಂಗಳೂರು: ಕೊರೊನಾ ಲಾಕ್ಡೌನ್ ಬಳಿಕ ಪೊಲೀಸರಲ್ಲಿರುವ ಮಾನವೀಯತೆ ಅನಾವರಣಗೊಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಪೊಲೀಸರು ಎಂದರೆ ಲಾಠಿ ಹಿಡಿದು ಹೊಡೆದು ಜನರ ದೃಷ್ಟಿಯಲ್ಲಿ ಕಲ್ಲು ಹೃದಯದವರು ಎಂಬ ಮಾತನ್ನು ಸಿಲಿಕಾನ್ ಸಿಟಿ ಪೊಲೀಸರು ದೂರ ಮಾಡಿದ್ದಾರೆ.
ನಗರದ ಮಾರತ್ ಹಳ್ಳಿ, ಜಾಲಹಳ್ಳಿ, ಪುಲಕೇಶಿನಗರ ನಗರ ಸೇರಿ ಬಹುತೇಕ ಠಾಣೆಗಳು ಸಾರ್ವಜನಿಕರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿವೆ. ಆಡುಗೋಡಿ ಪೊಲೀಸರಂತೂ ತಮ್ಮ ಠಾಣಾ ವ್ಯಾಪ್ತಿಯ ಗುಲ್ಬರ್ಗ ಕಾಲೋನಿಯಲ್ಲಿ ವಾಸಿಸುತ್ತಿರುವ ನೂರಕ್ಕೂ ಹೆಚ್ಚು ವಲಸೆ ಕುಟುಂಬಗಳನ್ನು ದತ್ತು ತೆಗೆದುಕೊಂಡು ಲಾಕ್ ಡೌನ್ ಮುಗಿಯುವರೆಗೂ ರೇಷನ್ ಒದಗಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ.
ವಿವಿಧ ಸಂಘ- ಸಂಸ್ಥೆಗಳಿಂದ ನೀಡುವ ಆಹಾರ ಪೊಟ್ಟಣ, ರೇಷನ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ಹಂಚುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಲಸೆ ಕಾರ್ಮಿಕರು ನೆಲೆಸಿರುವ ಪ್ರದೇಶಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖುದ್ದು ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದಕ್ಕೆ ಎಲ್ಲ ವಲಯದ ಡಿಸಿಪಿಗಳು ಸಾಥ್ ನೀಡಿದ್ದಾರೆ.
ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವಲ್ಲಿ ಹಿಂದೆ ಬಿದ್ದಿಲ್ಲ
ಸಂಚಾರ ಪೊಲೀಸರು ಕೂಡಾ ಕೊರೊನಾ ವೈರಸ್ ದಿಂದ ದೂರ ಇದ್ದು, ಮನೆಯಲ್ಲಿ ಸುರಕ್ಷಿತರಾಗಿರಿ ಎಂದು ಪ್ರಮುಖ ರಸ್ತೆ ಹಾಗೂ ಜಂಕ್ಷನ್ಗಳಲ್ಲಿ ಚಿತ್ರ ಬಿಡಿಸುವ ಮೂಲಕ ಅರಿವು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಕೆಲ ಸಂಚಾರ ಪೊಲೀಸರಂತೂ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.
ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡ ನೇತೃತ್ವದಲ್ಲಿ ಎಲ್ಲ ಪೊಲೀಸರು ತಮ್ಮ ಕೈಲಾದಷ್ಟು ದೇಣಿಗೆ ನೀಡಿ, ಸಾವಿರಾರು ಬಡವರಿಗೆ ರೇಷನ್ ವಿತರಿಸುವ ಕೆಲಸ ಮಾಡಿದ್ದಾರೆ. ಅದೇ ರೀತಿ ನಗರದ ಮಹಿಳಾ ಡಿಸಿಪಿಗಳು ಬಡ ಮಹಿಳೆಯರಿಗೆ ಪ್ಯಾಡ್ ವಿತರಿಸಿ ಸೂಕ್ಷ್ಮತೆ ಮೆರೆದಿದ್ದಾರೆ.
ಒಟ್ಟಾರೆ ಕೊರೊನಾ ಬಂದಾಗಿನಿಂದಲೂ ವೈದ್ಯರಂತೆ 24x7 ಪೊಲೀಸರು ತನುಮನದಿಂದಷ್ಟೆ ಅಲ್ಲದೇ ಧನದಿಂದಲೂ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರು ಬೀದಿಯಲ್ಲಿ ನಿಂತು ನಮ್ಮನ್ನು ಮನೆಯಲ್ಲಿ ಸುರಕ್ಷಿತವಾಗಿ ಇರಿ ಎಂದು ಮನವಿ ಮಾಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸೆಲ್ಯೂಟ್.