ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸದ್ಯ ವಲಸೆ ಕಾರ್ಮಿಕರು ತಮ್ಮ ಹುಟ್ಟೂರಿಗೆ ತೆರಳುತ್ತಿದ್ದು, ರೈಲು ಹತ್ತುವ ಮೊದಲು ಅರಮನೆ ಮೈದಾನದ ಬಳಿ ಸೇರುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ವಲಸೆ ಕಾರ್ಮಿಕರಿಗೆ ಅರಮನೆ ಮೈದಾನದ ಬಳಿ ಶೆಡ್ ವ್ಯವಸ್ಥೆ ಮಾಡಲಾಗಿದೆ.
ಕಳೆದ ಶುಕ್ರವಾರ ನಗರದಲ್ಲಿದ್ದ ವಲಸೆ ಕಾರ್ಮಿಕರು ಇಲ್ಲಿನ ಶೆಡ್ ಬಳಿ ಸೇರಿದ್ದಾಗ ಬಿರುಗಾಳಿ ಸಹಿತ ಭಾರಿ ಮಳೆ ಬಂದಿದೆ. ಪರಿಣಾಮ ಮರ ಧರಾಶಾಹಿಯಾಗಿ ಅರಮನೆ ಮೈದಾನದ ಶೆಲ್ಟರ್ ಮೇಲೆ ಬಿದ್ದು ಶೆಲ್ಟರ್ ಕುಸಿದು ಬಿದ್ದಿದೆ. ಇದೇ ವೇಳೆ ಶಿವಾಜಿನಗರ ಠಾಣೆಯ ಕಾನ್ಸ್‌ಟೇಬಲ್ ರವಿ ಕುಮಾರ್ ಒಬ್ಬಂಟಿಯಾಗಿ ಕರ್ತವ್ಯ ನಿರ್ವಹಿಸಿ ಸಮಯಪ್ರಜ್ಞೆ ಮೆರೆದು, ಶೆಲ್ಟರ್ ಅವಶೇಷದಡಿ ಸಿಲುಕಿದ್ದ ಮಗು ಸೇರಿ ನೂರಾರು ಜನರನ್ನು ರಕ್ಷಿಸಿದ್ದಾರೆ. ಈ ಮೂಲಕ ಬಡ ವಲಸೆ ಕಾರ್ಮಿಕರ ಪ್ರಾಣ ಉಳಿಸಿದ್ದರು.
ಒಂದು ವೇಳೆ ಕಾನ್ಸ್‌ಟೇಬಲ್ ಸಮಯಪ್ರಜ್ಞೆ ತೋರದಿದ್ದರೆ ಇಡೀ ರಾಜ್ಯವೇ ತಲೆತಗ್ಗಿಸಬೇಕಿತ್ತು. ಇವರ ಕಾರ್ಯ ಮೆಚ್ಚಿ ಶಿವಾಜಿನಗರ ಪೊಲೀಸ್ ಠಾಣೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಕಾನ್ಸ್‌ಟೇಬಲ್ ರವಿಕುಮಾರ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ.ಶರಣಪ್ಪ ಇದ್ದರು.
ಎಂಬಿಎ ಗೋಲ್ಡ್ ಮೆಡಲಿಸ್ಟ್ ಆಗಿರುವ ಕಾನ್ಸ್‌ಟೇಬಲ್ ರವಿಕುಮಾರ್, ಇಲಾಖೆಯಲ್ಲಿ ಪ್ರಾಮಾಣಿಕ ಕರ್ತವ್ಯಕ್ಕೆ ಹೆಸರಾಗಿದ್ದಾರೆ.