ಬೆಂಗಳೂರು : ಕೋವಿಡ್ 3ನೇ ಅಲೆ ಆತಂಕ ಹಿನ್ನೆಲೆ ರಾಜ್ಯ ಸರ್ಕಾರದಿಂದ ನೈಟ್ ಕರ್ಫ್ಯೂ ಆದೇಶ ಬೆನ್ನಲೇ ನಗರ ಪಶ್ಚಿಮ ವಿಭಾಗದ ಪೊಲೀಸರು ನೈಟ್ ಕರ್ಫ್ಯೂ ಜಾರಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಷ್ಕೃತ ಆದೇಶದಂತೆ ಇಂದು ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿರುವ ಹಿನ್ನೆಲೆ ಇಂದಿನಿಂದ 9 ಗಂಟೆಯ ನಂತರ ಅಂಗಡಿ-ಮುಂಗಟ್ಟುಗಳು ತೆರೆಯದಿರಲು ಸೂಚಿಸುತ್ತಿದ್ದಾರೆ.
ಸಿಟಿ ಮಾರುಕಟ್ಟೆ, ಜಾಲಿ ಮೊಹಲ್ಲಾ, ಚಿಕ್ಕಪೇಟೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಧ್ವನಿವರ್ಧಕಗಳ ಮೂಲಕ 9 ಗಂಟೆಯ ಒಳಗಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬೇಕು. ಪಾಲನೆ ಮಾಡದಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಎಲೆಕ್ಟ್ರಾನಿಕ್ ಯೂನಿಯನ್, ಬಟ್ಟೆ ಯೂನಿಯನ್, ತರಕಾರಿ ಮಾರುಕಟ್ಟೆಯ ಯೂನಿಯನ್, ಎಸ್ಪಿ ರೋಡ್ ಸ್ಪೇರ್ಸ್ ಯೂನಿಯನ್ನ ಎಲ್ಲಾ ಮುಖಂಡರಿಗೆ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಆಗಿರುವ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ಹೆಚ್ಚಳ ಹಿನ್ನೆಲೆ ನಿಯಂತ್ರಣ ಕ್ರಮವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದೆಲ್ಲೆಡೆ ನೈಟ್ ಕರ್ಫ್ಯೂ ವಿಧಿಸಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದಲೇ ನೈಟ್ ಮತ್ತು ಗಡಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ : ಸಿಎಂ ಬೊಮ್ಮಾಯಿ ಆದೇಶ