ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ನಂತರ ಸಾಕಷ್ಟು ರಸ್ತೆಗಳು ಬಾಯ್ಬಿಟ್ಟಿವೆ. ಇದರಿಂದ ಹಲವಾರು ಅಪಘಾತ ಸಂಭವಿಸಿ ಪ್ರಾಣಾಹುತಿ ಪಡೆದುಕೊಳ್ಳುತ್ತಿವೆ.
ರಸ್ತೆ ಗುಂಡಿಗಳನ್ನು ಮುಚ್ಚಿಸದ ಬಿಬಿಎಂಪಿಯ ವಿರುದ್ಧ ನಗರದಲ್ಲಿ ಜನರು ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದರು.
ಗುಂಡಿದೇವರಿಗೆ ಹೂವಿನಲಂಕಾರ, ಆರತಿ
ನಗರದ ಕಾಕ್ಸ್‌ಟೌನ್ ಚಾರ್ಲ್ಸ್ ಕಾಂಪ್ಬೆಲ್ ಮುಖ್ಯ ರಸ್ತೆಯಲ್ಲಿ ಜನರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಗುಂಡಿದೇವರಿಗೆ ಹೋಮ ಮಾಡುವ ಮೂಲಕ ವಾಹನ ಸವಾರರ ಹಿತಕ್ಕಾಗಿ ಸಾರ್ವಜನಿಕರು ಬೇಡಿಕೊಂಡರು. ರಸ್ತೆ ಗುಂಡಿ ಮುಚ್ಚದಿದ್ದರೆ ಪಾಲಿಕೆ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಅನುದಾನ ಕಬಳಿಕೆ ವಿರುದ್ಧ ತನಿಖೆಗೆ ಆಗ್ರಹ
ಬೆಂಗಳೂರಿನ ರಸ್ತೆಗಳ ದುರಸ್ಥಿಗೆ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಆದರೆ, ರಸ್ತೆಗಳು ಮಾತ್ರ ಬಾಯ್ಬಿಟ್ಟಿವೆ ಎಂದು ಸಾರ್ವಜನಿಕರು ಕಿಡಿಕಾರಿದರು.
ಗುಂಡಿಗಳಿಂದಾಗಿ ಅಪಘಾತಗಳು, ಸಾವುಗಳು ಸಾಮಾನ್ಯವಾಗಿವೆ. ಸರ್ಕಾರ ಬಿಡುಗಡೆ ಮಾಡಿದ ಹಣ ಯಾರ ಜೇಬು ಸೇರಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ರಸ್ತೆ ಅಭಿವೃದ್ಧಿ ಯೋಜನೆಗಳ ಅನುದಾನದ ಕುರಿತು ಸರ್ಕಾರ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಕಾಟಾಚಾರಕ್ಕೆ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದೆ. ಸಣ್ಣ ಮಳೆಗೂ ಅವು ಕಿತ್ತು ಹೋಗುತ್ತಿವೆ ಎಂದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.