ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಬಾಬು ಹಾಗೂ ಜಯಂತಿ ಬಂಧಿತ ಆರೋಪಿಗಳು. ಬಂಧಿತರಿಂದ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ದಂಪತಿ ಬೆಂಗಳೂರು ಮೂಲದವರಾಗಿದ್ದು, ಪತಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ. ಕಳೆದ ತಿಂಗಳು ಆರ್.ಟಿ. ನಗರ ಠಾಣಾ ವ್ಯಾಪ್ತಿಯ ಮಂಜುನಾಥ್ ನಗರದ ಮನೆಯೊಂದರಲ್ಲಿ ಬೀಗ ಹಾಕಿದ ಮನೆಯನ್ನು ಗುರಿಯಾಗಿಸಿಕೊಂಡು ದಂಪತಿ ಕಳ್ಳತನ ಮಾಡಿದ್ದರು. ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀಗ ಹಾಕಿದ ಮನೆಗಳೇ ದಂಪತಿಯ ಟಾರ್ಗೆಟ್:
ಮನೆ ಬಾಡಿಗೆ ಕೇಳುವ ಸೋಗಿನಲ್ಲಿ ದಂಪತಿ ನಗರದ ಬೀದಿ ಬೀದಿಗೆ ಅಲೆಯುತ್ತಿದ್ದರು. ಈ ವೇಳೆ, ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು. ಮನೆ ಮುಂಭಾಗದ ಕಿಟಕಿ ಸೇರಿದಂತೆ ಬೀಗದ ಕೀ ಇಡುವ ಸ್ಥಳಗಳನ್ನು ನೋಡಿಕೊಂಡು ಬರುತ್ತಿದ್ದರು. ಬಳಿಕ ವ್ಯವಸ್ಥಿತ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದರು. ಮನೆಯೊಳಗೆ ಪತ್ನಿ ಕಳ್ಳತನ ಮಾಡಿದರೆ ಪತಿ ಮನೆ ಮುಂಭಾಗದ ನಿಂತು ಯಾರಾದರೂ ಬಂದರೆ ಸೂಚನೆ ನೀಡುತ್ತಿದ್ದ. ಹೀಗೆ ಪಕ್ಕಾ ಪ್ಲ್ಯಾನ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದೇ ತಂತ್ರ ಬಳಸಿ ಆರ್.ಟಿ. ನಗರದಲ್ಲಿ ಮನೆಗಳ್ಳತನ ಮಾಡಿದ್ದರು.
ಬೆರಳಚ್ಚು ತಜ್ಞರ ಸುಳಿವಿನಿಂದ ಆರೋಪಿಗಳು ಪತ್ತೆ:
ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಸಿಕೊಂಡಿದ್ದರು. ಪರಿಶೀಲನೆ ವೇಳೆ 2019ರಲ್ಲಿ ಮಲ್ಲೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ತೆಗೆದುಕೊಂಡಿದ್ದ ಫಿಂಗರ್ ಪ್ರಿಂಟ್ ತಾಳೆಯಾಗಿತ್ತು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ಹೆಸರು ದುರ್ಬಳಕೆ.. ಲಕ್ಷಾಂತರ ರೂ. ವಂಚನೆ: ಐವರ ವಿರುದ್ಧ ಕೇಸ್, ಇಬ್ಬರು ಅರೆಸ್ಟ್
ಆರೋಪಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ, ಡಿಜೆ ಹಳ್ಳಿ, ಅಶೋಕ್ ನಗರ, ವಿವೇಕ ನಗರ, ವಿಧಾನಸೌಧ, ಕೆ.ಆರ್.ಪುರ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣ ಸೇರಿದಂತೆ ಆರು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.