ಬೆಂಗಳೂರು : ನಗರದ 8 ವಿಭಾಗಗಳು ಮತ್ತು ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ದಾಳಿ ಬಗ್ಗೆ ಮಾಹಿತಿ ನೀಡಿದ ಆಯುಕ್ತರು, 1,548 ರೌಡಿಗಳು ಇಂದು ನಮಗೆ ಸಿಕ್ಕಿದ್ದಾರೆ. ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ.
ನಮ್ಮ ಪೊಲೀಸರು ರೌಡಿಗಳು ವಾಸವಾಗಿದ್ದ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ಕೆಲವರ ಮನೆಯಲ್ಲಿ ಚಾಕು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳು ಸಿಕ್ಕಿವೆ. ಮತ್ತಷ್ಟು ಕಡೆ ಗಾಂಜಾ ಪತ್ತೆಯಾಗಿದೆ ಎಂದು ಹೇಳಿದರು.
ಕೆಲ ರೌಡಿಗಳ ಮನೆಗಳಲ್ಲಿ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಜೈಲಿನಲ್ಲಿ 200 ಗ್ರಾಂ ಗಾಂಜಾ, ಸಿಮ್ ಕಾರ್ಡ್, ಮೆಮೋರಿ ಕಾರ್ಡ್, ಪೆನ್‌ಡ್ರೈವ್ ದೊರೆಕಿವೆ. 409 ರೌಡಿಗಳ ವಿರುದ್ಧ ಮುಂಜಾಗ್ರತವಾಗಿ ಕ್ರಮಕೈಗೊಳ್ಳಲಾಗಿದೆ ಎಂದರು. ಆಯುಧ ಕಾಯ್ದೆಯಡಿ 48, ಎನ್‌ಡಿಪಿಎಸ್ ಅಡಿಯಲ್ಲಿ 84 ಹಾಗೂ ದರೋಡೆಗೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿವೆ. ಒಟ್ಟು 561 ರೌಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಕಮಲ್ ಪಂಥ್ ವಿವರಿಸಿದರು.
ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಮುರುಗನ್, ಸಂದೀಪ್ ಪಾಟೀಲ್, 8 ಡಿಸಿಪಿಗಳು, ಕ್ರೈಂ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕಪಡಿಸಿದ ಆಯುಕ್ತರು, ಕೇಂದ್ರ ಕಾರಾಗೃಹದಲ್ಲಿರುವ ರೌಡಿಗಳಾದ ಕುಣಿಗಲ್ ಗಿರಿ, ಉಳ್ಳಾಲ ಕಾರ್ತಿಕ್, ಕುಳ್ಳ ರಿಜ್ವಾನ್, ಬಾಂಬೆ ಸಲೀಂ, ಆಟೋ ರಾಮ ಇದ್ದ ಸೆಲ್‌ಗಳಲ್ಲಿ ಶೋಧನೆ ಮಾಡಲಾಗಿದೆ ಎಂದು ಹೇಳಿದರು.
ಜೈಲಿನಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಕಾರಾಗೃಹ ಎಡಿಜಿಪಿಗೆ ಮಾಹಿತಿ, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಜೈಲಿನಲ್ಲಿ ಕುಳಿತು ರೌಡಿಗಳ ಹತ್ಯೆಗೆ ಪ್ಲಾನ್‌ಗಳು ನಡೆಯುತ್ತಿವೆ. ಇದರ ಬಗ್ಗೆ ಸಹ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಲಾಗಿದೆ ಎಂದರು.