ಬೆಂಗಳೂರು : ರಾಜ್ಯದ ಆರು ವಲಯಗಳಲ್ಲಿ ಚಿತ್ರಕಲಾ ಗ್ಯಾಲರಿ ಪ್ರಾರಂಭ ಮಾಡುತ್ತೇವೆ. ಚಿತ್ರಕಲೆಗೆ ಡೀಮ್ಡ್ ಯೂನಿವರ್ಸಿಟಿ ಮಾಡಲು ಮುಂದಿನ ಅಧಿವೇಶನದಲ್ಲಿ ವಿಧೇಯಕ ತರಲಾಗುತ್ತದೆ. ಇದರ ಕೆಳಗೆ ಹಲವಾರು ಸಂಸ್ಥೆಗಳನ್ನ ತಂದು ಉತ್ತಮ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರಸಂತೆ ಎರಡು ವರ್ಷದ ನಂತರ ಪುನಾರಂಭಗೊಂಡಿದ್ದು, ಕುಮಾರಪಾರ್ಕ್ನಲ್ಲಿ ಸಿಎಂ ಬೊಮ್ಮಾಯಿ ಭಾರತಾಂಬೆಯ ಚಿತ್ರವಿರುವ ಫ್ಲೇಕಾರ್ಡ್ ಮೇಲೆ ಸಹಿ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟಂತೆ ನಾನು ಬಂದಿದ್ದೇನೆ.
ಬಹಳ ಜನ ಮನಸ್ಸಿನಲ್ಲಿ ಬೈದುಕೊಳ್ಳಬಹುದು, ನಾನು ಕಡಿಮೆ ಮಾತನಾಡುತ್ತೇನೆ. ಬಿ.ಎಲ್ ಶಂಕರ್ ಏನೇ ಮಾಡಿದರೂ ಅರ್ಥಪೂರ್ಣವಾಗಿ ಮಾಡುತ್ತಾರೆ. ಚಿತ್ರಸಂತೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಕಲಾವಿದರಿದ್ದಾರೆ. ಕಲೆ ಮನುಷ್ಯನ ಒಳಗೆ ಇರುವ ಪ್ರತಿಭೆ. ನಮ್ಮ ಕಲೆ ನಮ್ಮ ಹತ್ತಿರ ಇದ್ದರೆ ಅದರ ಬೆಲೆ ಗೊತ್ತಾಗಲ್ಲ, ಕಲೆಗೆ ಬೆಲೆ ಕೊಡುವ ಪ್ರಯೋಗ ಅಂದರೆ ಅದು ಚಿತ್ರಸಂತೆ. ಕಲಾವಿದನಿಗೆ ಹಣ ಮುಖ್ಯವಲ್ಲ, ಕಲೆಯಿಂದ ಬರುವ ಪ್ರತಿಕ್ರಿಯೆ ಬಹಳ ಮುಖ್ಯ ಎಂದರು.
ಕಲೆಯಲ್ಲೂ ತಪ್ಪು ಕಂಡು ಹಿಡಿಯುವ ವರ್ಗ ಇರುತ್ತದೆ, ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಸೃಷ್ಟಿಕರ್ತನಿಗೂ ಸರಿಯಾಗಿ ಬರೆಯಲು ಆಗಲ್ಲ, ಇದಕ್ಕೆ ತಲೆ ಕೆಡೆಸಿಕೊಳ್ಳದೇ ಮುಂದುವರೆಸಿ, ಚಿತ್ರಸಂತೆಯನ್ನ ಎಲ್ಲಾ ಜಿಲ್ಲೆಯಲ್ಲೂ ಒಂದೇ ಸರಿ ಪ್ರಾರಂಭ ಮಾಡಲು ಆಗುವುದಿಲ್ಲ. ಹಾಗಾಗಿ, ಮೊದಲು 6 ಜಿಲ್ಲೆಗಳಲ್ಲಿ ಚಿತ್ರಕಲಾ ಗ್ಯಾಲರಿ ಪ್ರಾರಂಭ ಮಾಡುತ್ತೇವೆ. ಮುಂಬರುವ ಅಧಿವೇಶನದಲ್ಲಿ ಡೀಮ್ಡ್ ಯುನಿವರ್ಸಿಟಿ ವಿಧೇಯಕ ತರುವ ಚಿಂತನೆ ನಡೆಸಲಿದ್ದು, ಚಿತ್ರಕಲಾ ವಿವಿಯನ್ನು ಬರುವ ದಿನಗಳಲ್ಲಿ ಪ್ರಾರಂಭ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಚಿತ್ರಕಲೆಗೆ ನಮ್ಮ ಸರ್ಕಾರ ಯಾವಾಗಲೂ ಬೆಂಬಲ ಕೊಡುತ್ತದೆ. ನಮ್ಮ ಹತ್ತಿರ ಏನು ಇದೆಯೋ ಅದೇ ನಾಗರಿಕತೆ. ನಾವು ಏನು ಆಗಿದ್ದೇವೋ ಅದು ಸಂಸ್ಕೃತಿ ಎನ್ನುತ್ತಾ ಕನ್ನಡ ಲೋಕವನ್ನೇ ಸೃಷ್ಟಿ ಮಾಡಿರುವ ಈ ಚಿತ್ರ ಸಂತೆಗೆ ಶುಭಕೋರಿದರು. ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಫ್ರೀಡಂ ಫೈಟರ್ ಥೀಮ್ ಪರಿಕಲ್ಪನೆಯಲ್ಲಿ ಚಿತ್ರಸಂತೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ವಿಷಯ ಎಂದು ಶುಭ ಹಾರೈಸಿದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಮಾತನಾಡಿ, ಕೊರೊನಾ ಕಾರಣ ಎರಡು ವರ್ಷದ ನಂತರ ಚಿತ್ರಸಂತೆ ಮಾಡಬೇಕಾಯಿತು. ಈ ಸಂತೆಗೆ ಅನೇಕರು ಆಕ್ಷೇಪ ಮಾಡಿದ್ದಾರೆ. ಬೀದಿಯಲ್ಲಿ ಮಾಡಿದ್ರು ಅಂತೆಲ್ಲಾ ಟೀಕಿಸಿದರು. ಆದರೆ, ಇದು ಸ್ಟಾರ್ ಹೋಟೆಲ್ನಲ್ಲಿ ಮಾಡೊದಲ್ಲ, ಎಲ್ಲಾ ಜನರಿಗೆ ತಲುಪಬೇಕು ಎಂದು ಮಾಡಿದ್ದೇವೆ.
ಇದಕ್ಕೆ ಒಂದು ಕೋಟಿ ಹಣ ಬೊಮ್ಮಾಯಿ ಸರ್ಕಾರ ನೀಡಿದೆ. ನಾನು ಈ ಮಟ್ಟಿಗೆ ಬರಲು ಬಸವರಾಜ ಅವರ ತಂದೆ ಎಸ್.ಆರ್ ಬೊಮ್ಮಾಯಿ ಕೂಡ ಕಾರಣ ಎಂದರು. ಚಿತ್ರಸಂತೆಯಲ್ಲಿ ನಟ ಪುನೀತ್ ರಾಜ್‍ಕುಮಾರ್, ಸಾಲು ಮರದ ತಿಮ್ಮಕ್ಕನ ಪ್ರತಿಮೆಗಳು ಗಮನ ಸೆಳೆದವು. ಸಿಎಂ ಬೊಮ್ಮಾಯಿ ಫೋಟೋ ವಿಶೇಷವಾಗಿತ್ತು.
ಇದನ್ನೂ ಓದಿ: ಎರಡು ವರ್ಷದ ನಂತರ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನಾರಂಭ