ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಆಸೀಮ್ ಷರೀಫ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಹೈಕೋರ್ಟ್ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನೋಟಿಸ್ ಜಾರಿ ಮಾಡಿದೆ.
ಜಾಮೀನು ನಿರಾಕರಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಆಸೀಮ್ ಶರೀಫ್ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ...ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಕೆಲ ಕಾಲ ವಾದ ಆಲಿಸಿದ ಪೀಠ, ವಿಚಾರಣಾ ನ್ಯಾಯಾಲಯ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಜಾಮೀನು ನಿರಾಕರಿಸಿದೆ. ಅರ್ಜಿಯಲ್ಲಿ ಆರೋಪಿಗೆ ಹೃದ್ರೋಗ ಸಮಸ್ಯೆ ಕಾರಣ ನೀಡಲಾಗಿದ್ದರೂ ಸೆ. 6ರಂದು ಜಯದೇವ ಹೃದ್ರೋಗ ಸಂಸ್ಥೆ ಆರೋಗ್ಯ ಸ್ಥಿರವಾಗಿರುವ ಕುರಿತು ವರದಿ ನೀಡಿದೆ. ಹೀಗಾಗಿ ಮೇಲ್ಮನವಿ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಹಾಗಿದ್ದೂ ವಾದ ಮಂಡನೆಗೆ ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಎನ್‌ಐಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಡಿ. 14ಕ್ಕೆ ಮುಂದೂಡಿತು.
ಇದನ್ನೂ ಓದಿ...ಕೋವಿಡ್ ಜಾಹೀರಾತು ಅನುಮತಿ ದುರ್ಬಳಕೆ: ತೆರಿಗೆ ವಸೂಲಿಗೆ ಹೈಕೋರ್ಟ್ ತಾಕೀತು
ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿ 2020ರ ಸೆ. 8ರಂದು ಆದೇಶಿಸಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ, ಹತ್ಯೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಆತನಿಗೆ ಚಿಕ್ಕ ವಯಸ್ಸಿನ ಮೂವರು ಹೆಣ್ಣು ಮಕ್ಕಳಿದ್ದಾರೆ. ವೃದ್ಧ ತಾಯಿ ಇದ್ದಾರೆ. ಮುಖ್ಯವಾಗಿ ಆತನಿಗೆ ಮಧುಮೇಹ ಸಮಸ್ಯೆ ಇದೆ. ಜೈಲಿನಲ್ಲಿ ಹೃದಯಾಘಾತವಾಗಿತ್ತು. ಕೋವಿಡ್ ಪಾಸಿಟಿವ್ ಆಗಿತ್ತು. ಹೀಗಾಗಿ ಆನಾರೋಗ್ಯದ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗಿದೆ.