ಬೆಂಗಳೂರು: ಹತ್ತು ಗಂಟೆಯಾಗಲಿ, ಹೊರಗೆ ಹೊರಡೋದೆ. ಈ ರೀತಿ 9 ಗಂಟೆಯಿಂದಲೇ ಇಲ್ಲೊಬ್ಬರು ಕಾಯುತ್ತಿದ್ದಾರೆ. ಅದು ಮತ್ಯಾರೂ ಅಲ್ಲ. ಮಹಾಮಾರಿ ಕೋವಿಡ್. ಇದು ವ್ಯಂಗ್ಯ ಎನಿಸಿದರೂ, ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವಂತೆ ಗೋಡೆ ಮೇಲೆ ಚಿತ್ರ ಬರೆದಿದ್ದಾರೆ ಖ್ಯಾತ ಚಿತ್ರ ಕಲಾವಿದ ಬಾದಲ್ ನಂಜುಂಡಸ್ವಾಮಿ.
ಹೌದು, ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕಲಾವಿದರ ಕಣ್ಣುಗಳಲ್ಲಿ ಎಲ್ಲವೂ ವಿಶೇಷವಾಗಿ ಕಾಣುತ್ತದೆ. ತಮ್ಮ ಮೂಲಕ ಜಾಗೃತಿ ಮೂಡಿಸುವುದು ಕಲಾವಿದರಿಗೆ ದೇವರು ಕೊಟ್ಟಿರುವ ವರ. ಈ ಕಲಾವಂತಿಕೆಯನ್ನು ಅತ್ಯದ್ಭುತವಾಗಿ ಬಳಸಿಕೊಳ್ಳುತ್ತಿರುವ ಕಲಾವಿದರಲ್ಲಿ ಬಾದಲ್ ನಂಜುಂಡಸ್ವಾಮಿ ಕೂಡ ಒಬ್ಬರು.
ಇದನ್ನೂ ಓದಿ: ಕೊರೊನಾ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಠಾಣೆ ಮುಂದೆ 3ಡಿ ಚಿತ್ರ ಬಿಡಿಸಿದ ಬಾದಲ್
ಹೆಬ್ಬಾಳದ ಆರ್ಟಿ ನಗರದಲ್ಲಿ ಒಂದು ಗೋಡೆ ಬದಿ ಕುರ್ಚಿಯಲ್ಲಿ ಕಾಯುತ್ತಾ ಕುಳಿತಿರುವ ಮನುಷ್ಯ ರೂಪದ ಕೋವಿಡ್ ಹಾಗೂ 9 ಗಂಟೆಯಾಗಿರುವುದನ್ನು ತೋರಿಸುತ್ತಿರುವ ಗಡಿಯಾರದ ಚಿತ್ರ ಬರೆದು, ಅಲ್ಟ್ರಾ ಯುವಿ ರೇಸ್ ಟಾರ್ಚ್ ಮೂಲಕ ರಾತ್ರಿ ವೇಳೆ ಇದರ ವೀಡಿಯೋ ಮಾಡಲಾಗಿದೆ.
ಕೋವಿಡ್ ಹರಡುವುದನ್ನು ತಡೆಯಲು ಸರ್ಕಾರ ಕಳೆದ ಎರಡು ವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರಿಗೆ ಜನಸಂಚಾರ ನಿಷೇಧಿಸಲಾಗಿದೆ. ಆದರೆ ಸರ್ಕಾರದ ಈ ನಿಯಮಕ್ಕೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಎಲ್ಲರೂ ಮಲಗಿಕೊಂಡ ಬಳಿಕ ಕೊರೊನಾ ಊರೆಲ್ಲಾ ಓಡಾಡುತ್ತದೆ ಎಂಬುದಾಗಿ ಸರ್ಕಾರದ ನಿಯಮಕ್ಕೆ ವ್ಯಂಗ್ಯ ಮಾಡುತ್ತಿದ್ದಾರೆ. ಇದನ್ನು ತಮ್ಮ ಚಿತ್ರದ ಮೂಲಕ ಜನರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಕಲಾವಿದ ಬಾದಲ್.
ಈ ಹಿಂದೆಯೂ ಗುಂಡಿ ಬಿದ್ದ ರಸ್ತೆಯಲ್ಲಿ ಚಂದ್ರಯಾನ ಮಾಡುತ್ತಿರುವ ಚಿತ್ರ ಕೂಡಾ ವಿಶ್ವ ಪ್ರಸಿದ್ಧವಾಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿತ್ತು. ಇದಲ್ಲದೆ ಕೋವಿಡ್ ಜನಜಾಗೃತಿ ಮೂಡಿಸುವ ಸಾಕಷ್ಟು ಚಿತ್ರಗಳು ನಗರದ ಗೋಡೆಗಳಲ್ಲಿ ಇಂದಿಗೂ ರಾರಾಜಿಸುತ್ತಿವೆ.
ಇದನ್ನೂ ಓದಿ: ಬಾದಲ್ ಕ್ರಿಯೇಟಿವಿಟಿಗೆ ಸಿಕ್ತು ಪ್ರತಿಫಲ: ಚಂದ್ರಗ್ರಹದಂತಿದ್ದ ರಸ್ತೆಯಲ್ಲೀಗ ರಿಪೇರಿ ಕಾರ್ಯ