ಬೆಂಗಳೂರು: ಸಿಲಿಕಾನ್ ಸಿಟಿ ನಿವಾಸಿಗರಿಗೆ ಹಾಗೂ ಬಿಬಿಎಂಪಿಗೆ, ಏಕಕಾಲದಲ್ಲಿ ಅನುಕೂಲವಾಗುವಂತಹ ಆಸ್ತಿಗಳ ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಮಾಡಿಕೊಡುವ ಪ್ರಸ್ತಾವನೆ ಚುರುಕು ಪಡೆದಿದೆ.
ಈ ಕುರಿತು ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಖಾತಾ ವರ್ಗಾವಣೆಯ ನಿಯಮಾವಳಿಗಳನ್ನು ರೂಪಿಸುವ ಸಮಿತಿ ರಚನೆ ಕುರಿತು ಎರಡು ದಿನದಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ.
ಸಮಿತಿಯ ಸದಸ್ಯರು ಯಾರ್ಯಾರು ಎಂಬ ಪಟ್ಟಿಯನ್ನು ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿದ್ದು, ನಗರಾಭಿವೃದ್ಧಿ ಇಲಾಖೆ ಈ ಸಮಿತಿಗೆ ಗ್ರೀನ್ ಸಿಗ್ನಲ್ ನೀಡಿದರೆ, ಆ ಬಳಿಕ ಈ ಸಮಿತಿಯು ಸಭೆಗಳನ್ನು ನಡೆಸಿ ಖಾತಾ ವರ್ಗಾವಣೆಯ ನಿಯಮಾವಳಿಗಳನ್ನು ರಚಿಸಲಿದೆ. ಇದಕ್ಕಾಗಿ ಕಾನೂನು ಸಲಹೆಯೂ ಬೇಕಾಗಿದ್ದು, ಕಾನೂನು ವಿಭಾಗದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿರಲಿದ್ದಾರೆ.
ಸುಮಾರು ವರ್ಷಗಳಿಂದ ಖಾತಾ ವರ್ಗಾವಣೆ ಆಗಿರದೆ ಇರುವುದರಿಂದ ಭೂ ಮಾಲೀಕರಿಗೆ ಮನೆಕಟ್ಟಲು ಪ್ಲಾನ್ ಸ್ಯಾಂಕ್ಷನ್, ಬ್ಯಾಂಕ್ ಸಾಲ, ನಕ್ಷೆ ಮಂಜೂರಾತಿ ಸೇರಿದಂತೆ ವಾಸಯೋಗ್ಯ ಪ್ರಮಾಣಪತ್ರಗಳು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹಲವು ವರ್ಷಗಳಿಂದ ಕೃಷಿ ಭೂಮಿಯನ್ನು ವಸತಿ ಪ್ರದೇಶಕ್ಕೆ ಬಳಸಿಕೊಳ್ಳಲು ಇರುವ ಎ ಖಾತೆಯನ್ನು ನೀಡುವ ಬಗ್ಗೆ ಹಲವಾರು ಬಾರಿ ಹೇಳಿದ್ದರೂ, ಈವರೆಗೂ ಜಾರಿಗೆ ಬಂದಿಲ್ಲ.
ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಎ ಖಾತಾ ನೀಡುವುದನ್ನು, ಬಿಬಿಎಂಪಿ 2008ರಲ್ಲೇ ಸ್ಥಗಿತಗೊಳಿಸಿದ್ದು, ಇದೀಗ ಮತ್ತೆ ಚಾಲನೆ ದೊರಕುವ ಭರವಸೆ ಮೂಡಿದೆ. ಇದರಿಂದ ಪಾಲಿಕೆಗೂ 1,000 ದಿಂದ 1,500 ಕೋಟಿ ರೂಪಾಯಿಯಷ್ಟು ಆದಾಯದ ನಿರೀಕ್ಷೆಯಿದೆ. ಅಲ್ಲದೆ ಲಕ್ಷಾಂತರ ಭೂಮಾಲೀಕರಿಗೂ ಅನುಕೂಲವಾಗಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಪ್ಲಾನ್ ಇಲ್ಲದೆ ಕಟ್ಟುವ ಮನೆಗಳಿಂದ ರಸ್ತೆ ಜಾಗ ಹಾಗೂ ಕಟ್ಟಡಗಳ ನಡುವಿನ ಅಂತರ ಬಿಡದೆ ಬೇಕಾಬಿಟ್ಟಿಯಾಗಿ ಕಟ್ಟುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗ ಖಾತಾ ವರ್ಗಾವಣೆ ಮಾಡಿಕೊಡುವಂತೆ ಸಾರ್ವಜನಿಕರೂ ಮನವಿ ಮಾಡಿದ್ದಾರೆ.
ಸರ್ಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಾರ್ಚ್ ತಿಂಗಳಲ್ಲೇ ಸಭೆ ನಡೆಸಿ, ಸರ್ಕಾರ ಖಾತಾ ವರ್ಗಾವಣೆಗೆ ಅನುಮೋದನೆ ನೀಡಲಿದೆ. ಆದರೆ ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸುವಂತೆ ತಿಳಿಸಿತ್ತು. ಆ ಪ್ರಕಾರ ಸಮಿತಿ ರಚನೆಯಾಗುತ್ತಿದ್ದು, ಚುನಾವಣೆ ಪ್ರಕ್ರಿಯೆ ಮುಗಿದ ಒಂದು ತಿಂಗಳಲ್ಲಿ ನಿಯಮಾವಳಿಗಳ ರಚನೆಯಾಗಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಎ ಖಾತಾ ಎಂದರೇನು?
ಕೃಷಿಯೇತರ ಚಟುವಟಿಕೆಗಳಿಗೆ ಭೂ ಪರಿವರ್ತನೆ ಮಾಡಿಸಿದ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿದ ಕಟ್ಟಡಗಳು, ಬಡಾವಣೆಗಳು ಹಾಗೂ ಅಪಾರ್ಟ್ಮೆಂಟ್ಗಳು. ಇದರಲ್ಲಿ ಆಸ್ತಿ ಮಾಲೀಕರ ಹೆಸರು, ವಿಸ್ತೀರ್ಣ, ಆಸ್ತಿ ನೋಂದಣಿ ಸಂಖ್ಯೆ, ಸ್ಥಳದ ಮಾಹಿತಿ ಇರಲಿದೆ.
ಬಿ ಖಾತಾ ಎಂದರೆ, ಭೂ ಪರಿವರ್ತನೆ ಆಗದ ಕಂದಾಯ ಭೂಮಿಯಲ್ಲಿರುವ ನಿವೇಶನಗಳಿಗೆ ಬಿ ಖಾತಾ ನೀಡಲಾಗಿರುತ್ತದೆ. ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾತ್ರ ಬಿ ಖಾತಾ ನೀಡಲಾಗಿರುತ್ತದೆಯೇ ಹೊರತು ಅಧಿಕೃತ ದಾಖಲೆಗಳು ಇರದ ಕಾರಣ ಯಾವುದೇ ಸಾಲ ಸೌಲಭ್ಯ ಹಾಗೂ ನಕ್ಷೆ ಮಂಜೂರಾತಿಗಳು ಸಿಗುವುದಿಲ್ಲ. ಆದ್ರೆ ಇವು ಅಕ್ರಮ-ಸಕ್ರಮದಡಿ ಬರದಿರುವ ಕಾರಣ, ಖಾತಾ ವರ್ಗಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.