ಬೆಂಗಳೂರು: ಇಂದು ಆಯುಧ ಪೂಜೆ ಹಬ್ಬ. ವರ್ಷ ಪೂರ್ತಿ ಬಳಸುವ ವಾಹನಗಳಿಗೆ ಪೂಜೆ ಮಾಡಿ ನಮಿಸುವ ದಿನ. ಒಂದು ಕಡೆ ಕೆಲವರು ವಾಹನಗಳಿಗೆ ಭರ್ಜರಿ ಪೂಜೆ ಮಾಡಿ ಸಂಭ್ರಮಿಸುತ್ತಿದ್ದರೆ, ಬೆಂಗಳೂರು ಜನರ ಜೀವನಾಡಿ, ಬಡ, ಮಧ್ಯಮ ವರ್ಗದ ಸಾರಥಿ ಬಿಎಂಟಿಸಿ ಬಸ್ಗಳು ಮಾತ್ರ ಸರಿಯಾದ ಪೂಜೆ, ಅಲಂಕಾರ ಇಲ್ಲದೇ ಎಂದಿನಂತೆ ಕಾರ್ಯಾಚರಣೆ ಮುಂದುವರೆಸಿದ್ದವು.
ಕಾರ್ಮಿಕ ಸಂಘಟನೆಗಳಿಂದ ಆಯುಧ ಪೂಜೆ:
ಸಿಬ್ಬಂದಿಗಳಿಗೆ ಸರಿಯಾದ ಸಂಬಳ ಇಲ್ಲದೇ ತಮ್ಮ ನೆಚ್ಚಿನ ಬಸ್ಸಿಗೆ ಸಂಸ್ಥೆ ನೀಡಿದ ಬಿಡಿಗಾಸು ಹಣದಲ್ಲಿ ಪೂಜೆ ಮಾಡಲಾಗದೇ ಬೇಸರದಲ್ಲಿದ್ದರು. ಸಾರಿಗೆ ನಿಗಮ ಒಂದು ಬಸ್ಗೆ ಆಯುಧ ಪೂಜೆ ಮಾಡಲು 100 ರೂ. ನೀಡಿತ್ತು.
ಕರ್ನಾಟಕ ಕಾರ್ಮಿಕರ ಒಕ್ಕೂಟದಿಂದ ಬಸ್ಗಳಿಗೆ ಪೂಜೆ
ಜತೆಗೆ ಸಾರಿಗೆ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದೇ ಇರುವ ವಿಷಯ ತಿಳಿದ ಕರ್ನಾಟಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣಕ್ಕೆ ತೆರಳಿ ಅಲ್ಲಿದ್ದ ಬಿಎಂಟಿಸಿ ಬಸ್ಸುಗಳಿಗೆ ಆಯುಧ ಪೂಜೆ ಸಲ್ಲಿಸಿದ್ದಾರೆ. ಬಸ್ಗೆ ಬಾಳೆ ಕಂದು ಕಟ್ಟಿ, ಹೂ ಹಾರ ಹಾಕಿ, ಕುಂಬಳ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಸಾರಿಗೆ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
100 ರೂ.ಗೆ ಪೂಜೆ ಆಗುತ್ತಾ? .. ಕಾರ್ಮಿಕರ ಪ್ರಶ್ನೆ
ಒಂದು ಬಸ್ಸಿಗೆ ಸರಳವಾಗಿ ಪೂಜೆ ಮಾಡಬೇಕು ಎಂದರೆ ಎರಡು ಬಾಳೆ ಕಂದು, 4 ಮಾರು ಹೂ, 6 ನಿಂಬೆಹಣ್ಣು, ಬಾಳೆ ಹಣ್ಣು, ತೆಂಗಿನಕಾಯಿ, ಕರ್ಪೂರ ಕುಂಕುಮ, ಬೂದು ಕುಂಬಳಕಾಯಿ, ವಿಭೂತಿ ಬೇಕು.ಇಷ್ಟೇಲ್ಲ 100 ರೂ. ಬರುತ್ತಾ.?. ಈ ಹಿಂದೆ ಸಾರಿಗೆ ಸಿಬ್ಬಂದಿ ತಮ್ಮ ಕೈಯಿಂದ ಸಾವಿರಾರು ರೂ.ಹಣ ಖರ್ಚು ಮಾಡಿ ತಮ್ಮ ವಾಹನಗಳಿಗೆ ಪೂಜೆ ಮಾಡುತ್ತಿದ್ದರು. ಆದರೆ, ಕೋವಿಡ್ ಹಾಗೂ ಮುಷ್ಕರದ ಬಳಿಕ ಸಾರಿಗೆ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಬರುವ ಅರ್ಧ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್ ಅಳಲು ತೋಡಿಕೊಂಡಿದ್ದಾರೆ.