ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದೆ. ವರ್ಷ ಪೂರ್ತಿ ತಮಗೆ ಸಾಥ್ ಕೊಟ್ಟ ವಾಹನಗಳಿಗೆ ಅನೇಕರು ನಗರದ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಇನ್ನು ಯು.ಬಿ ಸಿಟಿ ಹತ್ತಿರದ ಆಕ್ಸಿಟೆಂಡ್ ಗಣಪತಿ, ವೆಹಿಕಲ್ ಗಣಪತಿ ಅಂತಲೇ ಫೇಮಸ್ ಆಗಿರೋ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಜಯನಗರದ ಗಣೇಶ ದೇವಸ್ಥಾನ, ಮೈಸೂರು ರೋಡ್ ಬಳಿ ಇರುವ ಗಾಳಿ ಆಂಜನೇಯ ದೇವಸ್ಥಾನಗಳಲ್ಲೂ ಭರ್ಜರಿ ಪೂಜೆ ಸಲ್ಲಿಸಲಾಗುತ್ತಿದೆ.
ಇನ್ನು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನಲೆ ಕೆ.ಆರ್.ಮಾರ್ಕೆಟ್ಗೆ ಹೂವು-ಹಣ್ಣು ಖರೀದಿಗೆ ಜನ ಸಾಗರವೇ ಹರಿದು ಬಂದಿತ್ತು. ಇತ್ತ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು..
ಹಬ್ಬದ ಹಿನ್ನೆಲೆ:
13 ವರ್ಷಗಳ ವನವಾಸ ಮುಗಿಸಿ ಬಂದ ಪಾಂಡವರು, ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು 'ಬನ್ನಿ' ಮರದಲ್ಲಿ ಬಚ್ಚಿಡುತ್ತಾರೆ. ವನವಾಸದ ನಂತರ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಆಯುಧಗಳನ್ನು ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿಯೇ ಆಯುಧ ಪೂಜೆಯನ್ನ ಆಚರಿಸಿಕೊಂಡು ಬರಲಾಗುತ್ತಿದೆ.