ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸ್ಥಳಗಳಲ್ಲಿ 'ಉಗುಳುವುದು ನಿಲ್ಲಿಸಿ' ಎಂಬ ಜಾಗೃತಿ ಕಾರ್ಯಕ್ರಮಕ್ಕೆ ವಿಶೇಷ ಆಯುಕ್ತ ರಂದೀಪ್ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಬಿಬಿಎಂಪಿ, ರೋಟರಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಹಾಗೂ ಇನ್ನಿತರೆ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾರ್ಷಲ್‌ಗಳು ಮತ್ತು ಸ್ವಯಂಸೇವಕರು ನಗರದ ಗರುಡಾ ಮಾಲ್ನಿಂದ, ಮೆಗ್ರಾತ್ ರಸ್ತೆ, ಬ್ರಿಗೇಡ್ ರಸ್ತೆ ಮೂಲಕ ಚರ್ಚ್ ಸ್ಟ್ರೀಟ್ವರೆಗೆ ಸಾಗಿ ಜಾಗೃತಿ ಮೂಡಿಸಿದರು. 'ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ' ಎಂಬ ಸ್ಟಿಕ್ಕರ್‌ಗಳನ್ನ ಆಟೋ, ಕಾರುಗಳಿಗೆ ಅಂಟಿಸುವ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಚಾಲಕರಿಗೆ ವಿತರಿಸಲಾಯಿತು. ಜೊತೆಗೆ ಅಂಗಡಿಗಳ ಮುಂಭಾಗ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ವಿಶೇಷ ಆಯುಕ್ತ ರಂದೀಪ್, ಎಲ್ಲೆಂದರಲ್ಲಿ ಉಗುಳುವುದರಿಂದ ಕೊರೊನಾ, ಕ್ಷಯ ರೋಗ ಹಾಗೂ ಇನ್ನಿತರೆ ರೋಗಗಳು ಹರಡಲಿವೆ. ನಗರದ ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ಬಸ್ ತಂಗುದಾಣ, ಮೀಡಿಯನ್ಸ್, ಉದ್ಯಾನ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ತಂಬಾಕು ಹಾಕಿಕೊಂಡು ಉಗುಳಿದಾಗ ಅಲ್ಲಿ ಸ್ವಚ್ಛತೆ ಹಾಳಾಗುವುದರ ಜೊತೆಗೆ ಕೆಟ್ಟದಾಗಿ ಕಾಣುತ್ತದೆ. ಇದರಿಂದ ನಗರದ ಸೌಂದರ್ಯ ಹಾಳಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದೆಂಬುದರ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಬೈಲಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ 1,000 ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಓದಿ: ಸಿಡಿ ಹಿಂದೆ ಕೆಲ ಬಿಜೆಪಿ ನಾಯಕರ ಷಡ್ಯಂತ್ರ ಇದೆಯೇ? ಈ ಪ್ರಶ್ನೆಗೆ ಜಾರಕಿಹೊಳಿ ಉತ್ತರ ಹೀಗಿದೆ!