ನೆಲಮಂಗಲ: ಬಯಲುಸೀಮೆ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜಲಕ್ಷಾಮ ಸಮಸ್ಯೆ ಉಂಟಾಗದಿರಲಿ ಎಂದು ಕೇಂದ್ರ ಸರ್ಕಾರ ಜಲಶಕ್ತಿ-ಜಲಾಮೃತ ಅಭಿಯಾನ ಆರಂಭಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಣ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಪಿಡಿಒ ಗಂಗರಂಗಯ್ಯ, ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಸೇರಿದಂತೆ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.
ಈ ಕುರಿತು ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಜಲ ಸಾಕ್ಷರತೆ ಕುರಿತು ಕೇವಲ ಭಾಷಣ ಮಾಡುವುದಲ್ಲ. ಬದಲಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು. ನೀರಿನ ಮಿತ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಮಾಡುವುದು, ರಾಜಕಾಲುವೆ ಒತ್ತುವರಿ ತೆರವು, ವಿಫಲ ಕೊಳವೆ ಬಾವಿಗಳ ಮರು ಜಲಪೂರಣ, ಮಣ್ಣಿನ ಸವೆತ ತಡೆಯಲು ಗಿಡಗಳನ್ನು ನೆಡುವುದರಿಂದ ಜಲ ಸಾಕ್ಷರತೆ ಸಾಧಿಸಬಹುದೆಂದು ಹೇಳಿದರು.