ಬೆಂಗಳೂರು: ಲಾಕ್ಡೌನ್ ಆದೇಶ ಉಲ್ಲಂಘಿಸಿ ರಸ್ತೆಗೆ ಇಳಿಯುವವರ ಪ್ರಮಾಣ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸಂಚಾರಿ ಪೊಲೀಸರು ನಿರಂತರ ವಿಶೇಷ ಕಾರ್ಯಾಚರಣೆ ನಡೆಸಿ 12,500 ಕ್ಕಿಂತ ಹೆಚ್ಚು ವಾಹನ ಜಪ್ತಿ ನಡೆಸಿದ್ರು. ಆ ಬಳಿಕ ಅನಗತ್ಯವಾಗಿ ರೋಡಿಗಿಳಿಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆ ಗಂಭೀರವಾಗಿದೆ. ದಯವಿಟ್ಟು ಮನೆಯಲ್ಲಿಯೇ ಇರಿ ಎಂದು ನಿರಂತರವಾಗಿ ಎಲ್ಲ ರೀತಿಯಿಂದಲೂ ಜಾಗೃತಿ ಮೂಡಿಸಿದ್ದರೂ ಸವಾರರು ಮಾತು ಕೇಳುತ್ತಿರಲಿಲ್ಲ. ಹೀಗಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಂಚಾರಿ ಪೊಲೀಸರು ಈವರೆಗೂ ಬೈಕ್, ಆಟೋ ಹಾಗೂ ಕಾರುಗಳು ಸೇರಿದಂತೆ ಸುಮಾರು 12,500ಕ್ಕಿಂತ ಹೆಚ್ಚು ವಾಹನಗಳನ್ನ ವಶಕ್ಕೆ ಪಡೆದುಕೊಂಡು ಲಾಕ್ಡೌನ್ ಮುಗಿಯುವವರೆಗೂ ಸೀಜ್ ಮಾಡಿದ್ದಾರೆ.
ಮೊದಲಿಗಿಂತ ಲಾಕ್ಡೌನ್ ಆದೇಶ ಉಲ್ಲಂಘನೆ ಪ್ರಮಾಣ ಇಳಿಕೆಯಾಗಿದೆ. ಅಂದರೆ ರಸ್ತೆಗೆ ಅನಗತ್ಯವಾಗಿ ವಾಹನ ಚಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪೊಲೀಸರು ವಾಹನ ಜಪ್ತಿ ಮಾಡುವ ಭಯದಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಲಾಕ್ಡೌನ್ ಆದೇಶ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹವರ ವಿರುದ್ಧ ನೈಸರ್ಗಿಕ ವಿಪತ್ತು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ನ್ಯಾಯಾಲಯದಲ್ಲಿ ಉಲ್ಲಂಘನೆ ಮಾಡಿರುವುದು ಸಾಬೀತಾದರೆ ಕಾಯ್ದೆಯಡಿ ಗರಿಷ್ಠ ಎರಡು ವರ್ಷ ಜೈಲು ಅಥವಾ ದಂಡ ಪಾವತಿಸಬೇಕು ಎಂದರು.