ಬೆಂಗಳೂರು: ದಿನೇ ದಿನೆ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲೂ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದು, ಮೂರನೇ ಅಲೆಯಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಈ ಹಿಂದೆ ಕೋವಿಡ್ ಎರಡನೇ ಅಲೆ ಸೋಂಕು ಹರಡುವಿಕೆ ಹೆಚ್ಚಾಗಿ ರೋಗಿಗಳಿಗೆ ಹಾಸಿಗೆ ಸಮಸ್ಯೆಯಿಂದ ಹಿಡಿದು ಔಷಧಿಯತನಕ ಎಲ್ಲದರ ಕೊರತೆ ಉಂಟಾಗಿತ್ತು. ಪರಿಣಾಮ ಹೆಚ್ಚು ಸಾವು ನೋವು ಅನುಭವಿಸಬೇಕಾಯಿತು. ಇದೀಗ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಹತ್ತು ಪಟ್ಟು ಹೆಚ್ಚು ಸೋಂಕು ಹರಡುತ್ತಿದೆ. ಸೋಂಕಿತರ ಸಂಖ್ಯೆ ಬೆಂಗಳೂರು ಒಂದರಲ್ಲೇ 90 ಸಾವಿರಕ್ಕೂ ಅಧಿಕ ಇದ್ದು, ಭಾಗಶಃ ರೋಗಿಗಳು ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗಾಗಿಯೇ 4 ಸರ್ಕಾರಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಆಸ್ಪತ್ರೆ ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು, 26 ಖಾಸಗಿ ಆಸ್ಪತ್ರೆ ಸೇರಿದಂತೆ 2 ಕೋವಿಡ್ ಕೇರ್ ಸೆಂಟರ್ಗಳನ್ನು ನಿಯೋಜಿಸಲಾಗಿದೆ. ಜನರಲ್ ಬೆಡ್, ಹೆಚ್ಡಿಯು, ಐಸಿಯು, ಐಸಿಯು ವಿಥ್ ವೆಂಟಿಲೇಟರ್ ಎಲ್ಲ ಸೇರಿ 6,518 ಬೆಡ್ಗಳ ವ್ಯವಸ್ಥೆಯಿದೆ.
ಚಿಕಿತ್ಸೆಗೆ ಹಾಸಿಗೆ ಲಭ್ಯವಿದೆಯಾ?
ಸೌಲಭ್ಯ ಇರುವ ಆಸ್ಪತ್ರೆ | ಲಭ್ಯ | ಬಳಕೆ | ಖಾಲಿ |
ಸರ್ಕಾರಿ ಮೆಡಿಕಲ್ ಕಾಲೇಜು | 435 | 113 | 322 |
ಸರ್ಕಾರಿ ಆಸ್ಪತ್ರೆ | 1,083 | 193 | 890 |
ಖಾಸಗಿ ಮೆಡಿಕಲ್ ಕಾಲೇಜು | 3,477 | 23 | 3,454 |
ಖಾಸಗಿ ಆಸ್ಪತ್ರೆ | 1,433 | 20 | 1,413 |
ಕೋವಿಡ್ ಕೇರ್ ಸೆಂಟರ್ | 90 | 52 | 38 |
ಸದ್ಯದ ಅಂಕಿಅಂಶಗಳ ಪ್ರಕಾರ, ಜನರಲ್ ಬೆಡ್ನಲ್ಲಿ 197 ಸೋಂಕಿತರು ಇದ್ದರೆ, ಹೆಚ್ಡಿಯು 143, ಐಸಿಯುನಲ್ಲಿ 43, ಐಸಿಯು ವಿಥ್ ವೆಂಟಿಲೇಟರ್ನಲ್ಲಿ 18 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಹೆಚ್ಚಿನವರು ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
ರಾಜ್ಯದಲ್ಲಿ ಶೇ. 6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲು:
ರಾಜ್ಯದಲ್ಲಿ ಮೂರನೇ ಅಲೆಯ ಪ್ರಭಾವ ಜೋರಾಗಿದ್ದರೂ ಸಹ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 2ನೇ ಅಲೆಗಿಂತ ಕಡಿಮೆಯಾಗಿದೆ. ಈ ಕುರಿತು ರಾಜ್ಯ ವಾರ್ ರೂಂ ರಿಪೋರ್ಟ್ ಬಿಡುಗಡೆ ಮಾಡಿದೆ. ಈ ವರದಿ ಪೈಕಿ 2021ರ ಡಿಸೆಂಬರ್ 31 ರಿಂದ 2022ರ ಜನವರಿ 12ರ ವರೆಗೆ 84,067 ಸಕ್ರಿಯ ಪ್ರಕರಣಗಳಲ್ಲಿ ಶೇ. 6ರಷ್ಟು ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಶೇ. 1 ರಷ್ಟು ಸೋಂಕಿತರು ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಗೂ ಶೇ.93 ರಷ್ಟು ಸೋಂಕಿತರು ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು: ಆಸ್ತಿ ವಿಚಾರಕ್ಕೆ ಗಲಾಟೆ, ಮಹಿಳೆಯ ಬರ್ಬರ ಹತ್ಯೆ