ಬೆಂಗಳೂರು : ಆಟೋ ಚಾಲಕರ ಮನವಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ ಮಣಿದಿದೆ. ಆಟೋ ದರ ಏರಿಕೆಗೆ ಮನಸು ಮಾಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಈಗಾಗಲೇ ಆಟೋ ಯೂನಿಯನ್ ಜತೆಗೆ ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಯಿಂದ ದರ ಏರಿಕೆಗೆ ಸಮ್ಮತಿಯಿದೆ. ಇಂದು ಅಥವಾ ನಾಳೆ ನೂತನ ದರದ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ.
ಸದ್ಯ ಬೆಂಗಳೂರು ನಗರದಲ್ಲಿ ಒಂದು ಕಿ.ಮೀ.ಗೆ 13 ರೂ., ಕನಿಷ್ಠ ಶುಲ್ಕ 25 ರೂ. ನಿಗದಿಯಾಗಿತ್ತು. ಸಂಘಟನೆಗಳು ಕಿ.ಮೀ.ಗೆ 15 ರಿಂದ 16 ರೂ. ಹಾಗೂ ಕನಿಷ್ಠ ಶುಲ್ಕ 30 ರೂ. ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಸದ್ಯ ಜಿಲ್ಲಾಧಿಕಾರಿ ದರ ಏರಿಕೆಗೆ ಸಮ್ಮತಿಸಿದ್ದು, ಅಂತಿಮ ದರ ಇನ್ನೂ ನಿಗದಿ ಮಾಡಿಲ್ಲ.
2013ರಲ್ಲಿ ಕೊನೆಯದಾಗಿ ಆಟೋ ಮೀಟರ್ ದರ ಹೆಚ್ಚಾಗಿತ್ತು. ಸದ್ಯ ಆಟೋ ಗ್ಯಾಸ್ ದರ 57.88 ಪೈಸೆಗೆ ಏರಿದೆ. ಹೀಗಾಗಿ, ಮೀಟರ್ ಹಾಕಿ ಬಾಡಿಗೆ ಓಡಿಸುವುದು ಕಷ್ಟ. ಈ ಕಾರಣದಿಂದ ದರ ಏರಿಕೆ ಅನಿವಾರ್ಯ ಎಂದು ಆಟೋ ಯೂನಿಯನ್ ಪಟ್ಟು ಹಿಡಿದಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಶ್ರೀರಾಮುಲು, ಆಟೋ ದರ ಏರಿಕೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಬೇಕಿದೆ. ದರ ಏರಿಕೆ ಮಾಡುವ ಕುರಿತು ಜಿಲ್ಲಾಧಿಕಾರಿಗಳು ಪ್ರಸಾವ್ತನೆ ಸಲ್ಲಿಸಿದ್ದಾರೆ.
ಅದನ್ನ ಪರಿಶೀಲಿಸಿ ಜನತೆಗೆ ಯಾವುದೇ ರೀತಿಯ ಹೊರೆ ಆಗದಂತೆ ದರ ಏರಿಕೆ ಮಾಡಲಾಗುವುದು. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಜತೆಗೆ ಆಟೋ ಗ್ಯಾಸ್ ದರವೂ ಏರಿಕೆ ಆಗಿರುವುದರಿಂದ ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿದೆ ಎಂದರು.
ನೌಕರರ ಪರ ಕೆಲಸ ಮಾಡುತ್ತಿದ್ದೇನೆ : ಬಿಎಂಟಿಸಿ ನೌಕರರ ವಜಾ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಬಿ ಶ್ರೀರಾಮುಲು, ಕಾನೂನಾತ್ಮಕ ತೊಡಕುಗಳು ಇರುವ ಕಾರಣ ನೌಕರರಿಗೆ ವಜಾ ನೋಟಿಸ್ ಜಾರಿಯಾಗಿದೆ. ಈ ಬಗ್ಗೆ ನಾನು ಸಿಎಂ ಜತೆ ಮಾತನಾಡುತ್ತೇನೆ.
ಅವರಿಗೆ ನೋಟಿಸ್ ಕೊಡುವುದಾಗಲಿ, ಮನೆ ಖಾಲಿ ಮಾಡುವುದಾಗಲಿ ಎಲ್ಲವೂ ಸರಿ ಪಡಿಸುವ ಕೆಲಸ ಮಾಡುತ್ತೇನೆ. ನೌಕರರ ಪರ ನಾನು ಕೆಲಸ ಮಾಡುತ್ತಿದ್ದೇನೆ. ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.
ಈಗಾಗಲೇ ಕೆಎಸ್ಆರ್ಟಿಸಿ,ಎನ್ಡಬ್ಲ್ಯೂಕೆಎಸ್ಆರ್ಟಿಸಿ ಸೇರಿ ಇನ್ನುಳಿದ ಎಲ್ಲಾ ನೌಕರರ ವಜಾ ಆದೇಶ ವಾಪಸ್ ಪಡೆಯುವ ಕೆಲಸ ಆಗಿದೆ. ಆದ್ರೆ, ಬಿಎಂಟಿಸಿ ನೌಕರರ ವಿಚಾರದಲ್ಲಿ ಕೆಲ ಕಾನೂನಾತ್ಮಕ ತೊಡಕು ಇದೆ. ಎಫ್ಐಆರ್ ದಾಖಲಾಗಿರುವುದರಿಂದ ಅದನ್ನ ನ್ಯಾಯಾಲಯ ಮೂಲಕವೇ ವಜಾ ಮಾಡಬೇಕಿದೆ.
ಅದನ್ನ ಆದಷ್ಟು ಬೇಗ ಸರಿಪಡಿಸಿ ಸಮಸ್ಯೆಯನ್ನ ಇತ್ಯರ್ಥ ಮಾಡಲಾಗುತ್ತದೆ. ಹೀಗಾಗಿ, ನೌಕರರು ಯಾವುದೇ ಪ್ರತಿಭಟನೆಗೆ ಮುಂದಾಗಬೇಡಿ. ನಿಮಗಿರುವ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಸಿಎಂ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.