ಬೆಂಗಳೂರು: ಬೈಕ್ ಸವಾರನ ಮೇಲೆ ಕಾರು ಚಾಲಕ ಗುಂಡು ಹಾರಿಸಿದ ಪ್ರಕರಣ ಸಂಬಂಧ ಇದೀಗ ಆರೋಪಿ ಕಾರು ಮಾಲೀಕನನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ತನ್ನ ಐಷಾರಾಮಿ ಔಡಿ ಕಾರಿಗೆ ಬೈಕ್ ತಾಗಿಸಿದ್ದಾನೆ ಎಂದು ಕೋಪಗೊಂಡ ಕಾರು ಚಾಲಕ ಅನಿಲ್ ಎಂಬ ಬೈಕ್ ಸವಾರನ ಮೇಲೆ ಎರಡು ಬಾರಿ ಗುಂಡು ಹಾರಿಸಿ ಇತ್ತೀಚೆಗೆ ಪರಾರಿಯಾಗಿದ್ದನು. ಅದೃಷ್ಟವಶಾತ್ ಅನಿಲ್ ಪ್ರಾಣಾಪಾಯದಿಂದ ಪಾರಾಗಿದ್ದನು.
ಈ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಯಶವಂತಪುರ ಪೊಲೀಸರು, ಇದೀಗ ಕಾರು ಚಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಐಪಿಸಿ ಸೆಕ್ಷನ್ 307, 323, ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಖಾಸಗಿ ಹೋಟೆಲ್‌ನ ಮಾಲೀಕ ರವೀಶ್ ಗೌಡ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೈಕ್ ತಾಗಿಸಿದ ನೆಪದಲ್ಲಿ ಔಡಿ ಕಾರು ಚಾಲಕನ ಕಿರಿಕ್; ನಡುರಸ್ತೆಯಲ್ಲೇ ಗುಂಡು ಹಾರಿಸಿ ಎಸ್ಕೇಪ್
ಪರವಾನಗಿ ಪಡೆದ ಬಂದೂಕನ್ನು ತುರ್ತು ಪರಿಸ್ಥಿತಿ ವೇಳೆ ಜೀವ ರಕ್ಷಣೆಗಾಗಿ ಮಾತ್ರ ಬಳಸಬೇಕೇ ಹೊರತು, ಸಾರ್ವಜನಿಕ ಸ್ಥಳಗಳಲ್ಲಿ ಬಳಸುವಂತಿಲ್ಲ. ಆದರೆ ರವೀಶ್ ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿದ್ದ. ಸದ್ಯ ಆರೋಪಿಯ ಗನ್ ಲೈಸನ್ಸ್ ವಶಕ್ಕೆ ಪಡೆದಿರುವ ಪೊಲೀಸರು, ಲೈಸನ್ಸ್ ರದ್ದು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದ್ವಿಚಕ್ರ ವಾಹನ ಸವಾರ ಕಿರಿಕ್ ಮಾಡಿದ್ದ, ವ್ಹೀಲಿಂಗ್ ಮಾಡಿ ಗಲಾಟೆ ಮಾಡಿದ್ದ. ಹೀಗಾಗಿ ಗನ್ ಬಳಸಿದೆ ಎಂದು ವಿಚಾರಣೆ ವೇಳೆ ರವೀಶ್ ಗೌಡ ಹೇಳಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.