ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಗೃಹಿಣಿಯೋರ್ವಳು ತನ್ನ ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಳು. ಪತ್ನಿಯ ಸಾಲವನ್ನ ತೀರಿಸಿದ ಗಂಡ ನಿತ್ಯ ಆಕೆಗೆ ಬೈಯುತ್ತಿದ್ದ. ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಆತನ ಕೊಲೆಗೆ ಸುಪಾರಿ ಕೊಟ್ಟಿದ್ದಳು. ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸರು ಸೈಯದ್ ನಹೀಮ್, ಮೌಲಾ, ತಸ್ಲೀಮಾ ಮತ್ತು ಮಮತಾ ಎಂಬುವರನ್ನು ಬಂಧಿಸಿದ್ದಾರೆ.
ಪ್ರಕರಣ ಹಿನ್ನೆಲೆ: ಬೆಂಗಳೂರಿನ ಟಿ.ದಾಸರಹಳ್ಳಿಯ ಭುವನೇಶ್ವರ ನಗರದ ನಿವಾಸಿ 44 ವರ್ಷದ ಮಮತಾ ಗಂಡನ ಕೊಲೆಗೆ ಸುಪಾರಿ ಕೊಟ್ಟವಳು. ಈಕೆಯ ಗಂಡ ಮುಕುಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯ ಡಿಡಿಪಿಐ ಕಚೇರಿಯಲ್ಲಿ ಎಫ್ಡಿಎ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಮಮತಾ ಪಕ್ಕದ ಮನೆಯವರ ಬಳಿ ಚೀಟಿ ಹಾಕಿದ್ದಲ್ಲದೆ ತನ್ನ ಸ್ನೇಹಿತರನ್ನು ಕರೆದು ಚೀಟಿ ಹಾಕಿಸಿದ್ದಳು. ಚೀಟಿ ನಡೆಸುತ್ತಿದ್ದ ಪಕ್ಕದ್ಮನೆಯವಳು ಚೀಟಿ ಹಣದೊಂದಿಗೆ ಪರಾರಿಯಾಗಿದ್ದಾಳೆ.
ಚೀಟಿ ಹಾಕಿದ ಮಮತಾಳ ಸ್ನೇಹಿತರು ಹಣ ಕೇಳಲು ಶುರು ಮಾಡಿದ್ದರು. ಚೀಟಿದಾರರ ಕಿರುಕುಳದಿಂದ ಹೆಂಡತಿಯನ್ನು ಪಾರು ಮಾಡಲು ಗಂಡ ಮುಕುಂದ 25 ಲಕ್ಷ ಹಣ ಕೊಟ್ಟಿದ್ದ. ಆದರೆ ಹೆಂಡತಿಗೆ ದಿನಾ ಈ ವಿಚಾರವಾಗಿ ಬೈಯುತ್ತಿದ್ದ, ಗಂಡನ ಬೈಗುಳದಿಂದ ಬೇಸತ್ತ ಮಮತಾ ತನ್ನ ನೋವನ್ನು ಸ್ನೇಹಿತೆ ತಸ್ಲೀಮಾ ಬಳಿ ಹೇಳಿಕೊಂಡಿದ್ದಳು.
![Attempted murder of husband by wife in Doddaballapura](https://etvbharatimages.akamaized.net/etvbharat/prod-images/15487597_thu.jpg)
ತಸ್ಲೀಮಾ ಕೊಲೆ ಮಾಡಲು ಸುಪಾರಿ ಕೊಡುವಂತೆ ಮಮತಾಗೆ ಸಲಹೆ ನೀಡಿದ್ದಳಲ್ಲದೇ, ಬೆಂಗಳೂರಿನ ಕೆ.ಜಿ.ಹಳ್ಳಿಯ ಸೈಯದ್ ನಹೀಮ್ನನ್ನು ಕರ್ಕೊಂಡು ಬಂದು ಮಮತಾಳಿಗೆ ಪರಿಚಯಿಸಿದ್ದಳು. ಅದರಂತೆ ಮಮತಾ 40 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಳು. 10ಲಕ್ಷ ಮುಂಗಡ ಹಣವನ್ನು ಚಿನ್ನ ಮಾರಿ ಕೊಟ್ಟಿದ್ದಳು.
![Attempted murder of husband by wife in Doddaballapura](https://etvbharatimages.akamaized.net/etvbharat/prod-images/15487597_thum.jpg)
ಕೊಲೆ ಯತ್ನ: ಮುಕುಂದ ಕಚೇರಿಯಿಂದ ಬರುವಾಗ ಆತನ ಕೊಲೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಅದರಂತೆ ಮೇ 25ರಂದು ಯಲಹಂಕ ಕಡೆಗೆ ಮುಕುಂದ ತನ್ನ ಕಾರಿನಲ್ಲಿ ಸಹೋದ್ಯೋಗಿಗಳ ಜೊತೆ ಬರುತ್ತಿದ್ದಾಗ ಕೊಲೆಗೆ ಯತ್ನಿಸಿದ್ದಾರೆ. ಆದರೆ ಮುಕುಂದ ಕಾರಿನ ಬಾಗಿಲು ತೆಗೆಯದೆ ಕಾರಿನಲ್ಲೇ ಇದ್ದ ಕಾರಣ ಕೊಲೆ ಮಾಡಲು ಸಾಧ್ಯವಾಗಿಲ್ಲ.
ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬಂದ ಕಾರಿನ ನಂಬರ್ ಆಧಾರದಲ್ಲಿ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದಾರೆ. ಅದರಂತೆ ಈಗ ನಾಲ್ವರು ಆರೋಪಿಗಳಾದ ಸೈಯದ್ ನಹೀಮ್, ಮೌಲಾ, ತಸ್ಲೀಮಾ ಮತ್ತು ಮಮತಾಳನ್ನು ಬಂಧಿಸಿದ್ದಾರೆ, ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗಾಗಿ ತಲಾಶ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಈಜು ಬಾರದಿದ್ದರೂ ಸಮುದ್ರಕ್ಕೆ ಹಾರಿ ಹುಚ್ಚಾಟ : ನೋಡ ನೋಡುತ್ತಿದ್ದಂತೆ ಓರ್ವ ಸಾವು