ಬೆಂಗಳೂರು : ವಿಷಯ ಪ್ರಸ್ತಾಪಿಸಲು ಅವಕಾಶ ಕೊಡಲಿಲ್ಲವೆಂಬ ಕಾರಣಕ್ಕೆ ಜೆಡಿಎಸ್‌ನ ಹಿರಿಯ ಸದಸ್ಯ ಹೆಚ್ ಡಿ ರೇವಣ್ಣ ಏಕಾಂಗಿಯಾಗಿ ಸಭಾತ್ಯಾಗ ಮಾಡಿದರೆ, ಇನ್ನೊಂದೆಡೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗರಂ ಆದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಸದನ ಬೆಳಗ್ಗೆ ಆರಂಭವಾಗುತ್ತಿದ್ದಂತೆ ಹೆಚ್ ಡಿ ರೇವಣ್ಣ ಅವರು ಎದ್ದು ನಿಂತು ಮಾತನಾಡಲು ಮುಂದಾದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅಶಿಸ್ತು ಸಹಿಸುವುದಿಲ್ಲ ಎಂದಿದ್ದಕ್ಕೆ ಅಸಮಾಧಾನಗೊಂಡ ರೇವಣ್ಣ ಸಭಾತ್ಯಾಗ ಮಾಡಿದರು.
ಶಾಸಕರ ಮೇಲೆ ಸ್ಪೀಕರ್ ಗರಂ : ಸದನದಲ್ಲಿ ಮಾತನಾಡಲು ಪರಸ್ಪರ ಹೊಂದಾಣಿಕೆಯನ್ನು ಶಾಸಕರೇ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಜೆ ಎನ್ ಗಣೇಶ್ ಪ್ರಶ್ನೆ ಕೇಳಿ ಉತ್ತರ ಪಡೆದ ನಂತರವೂ ಉಪ ಪ್ರಶ್ನೆ ಕೇಳಿ ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆದಿದ್ದರು. ಆದರೂ ತೃಪ್ತರಾಗದೆ ಮತ್ತೆ ಉಪ ಪ್ರಶ್ನೆ ಕೇಳಲು ಎದ್ದು ನಿಂತರು.
ಆಗ ಸ್ಪೀಕರ್ ಪ್ರಶ್ನೋತ್ತರ ಅವಧಿಯಲ್ಲಿ ಸಾಕಷ್ಟು ಪ್ರಶ್ನೆ ಕೇಳಲಾಗಿದೆ. ಮತ್ತೊಮ್ಮೆ ಕೇಳಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ನಂತರ ಮುಂದಿನ ಪ್ರಶ್ನೆ ಕೇಳಲು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರನ್ನು ಆಹ್ವಾನಿಸಿದರು.
ಆಗ ಮಾತನಾಡಲು ಮುಂದಾಗಿದ್ದ ಗಣೇಶ್ ಅವರನ್ನು ಉದ್ದೇಶಿಸಿ, ನೀವು ಮಾತನಾಡಿ ಆ ನಂತರ ನಾನು ಪ್ರಶ್ನೆ ಕೇಳುತ್ತೇನೆ ಎಂದು ನಾರಾಯಣಸ್ವಾಮಿ ಹೇಳಿದಾಗ, ಸಿಟ್ಟಾದ ಸ್ಪೀಕರ್, ನಿಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡು ಪ್ರಶ್ನೆ ಕೇಳಲು ಆಗುವುದಿಲ್ಲ. ನೀವು ಪ್ರಶ್ನೆ ಕೇಳದಿದ್ದರೆ ಮುಂದಕ್ಕೆ ಹೋಗಬೇಕಾಗುತ್ತದೆ. ಇದು ಸಾರ್ವಜನಿಕರ ಸಭೆ ಅಲ್ಲ ಎಂದರು.