ಬೆಂಗಳೂರು : ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಂತೆ ಜನವರಿ 28ರಿಂದ ಫೆಬ್ರವರಿ 5ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಸುವ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಜನವರಿ 28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ಕಳೆದ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಂಟಿ ಅಧಿವೇಶನ ನಡೆಸಲು ದಿನಾಂಕ ನಿರ್ಧರಿಸಲಾಗಿತ್ತು. ಈ ಕುರಿತು ರಾಜ್ಯಪಾಲರ ಅನುಮೋದನೆ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿವೇಶನ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಉಳಿದಂತೆ ಜ.29ರಂದು ಸರ್ಕಾರಿ ಕಾರ್ಯಕಲಾಪ ನಡೆಯಲಿದ್ದು ಜ.30 ಹಾಗೂ ಜ.31 ರಜೆ ಇರಲಿದೆ. ಫೆಬ್ರವರಿ 1ರಿಂದ ಫೆ.5ರವರೆಗೆ ಐದು ದಿನಗಳ ಕಾಲ ಕಾರ್ಯಕಲಾಪಗಳು ನಡೆಯಲಿದ್ದು, ಒಟ್ಟು ಏಳು ದಿನಗಳ ಕಾಲ ಕಲಾಪ ನಡೆಯಲಿದೆ.
ಇದನ್ನೂ ಓದಿ: ಇಂದಿನಿಂದ ಅಧಿಕೃತವಾಗಿ ಗೋಹತ್ಯೆ ನಿಷೇಧ ಜಾರಿ; ಗೋ ಪೂಜೆ ಮಾಡಿ ಯಡಿಯೂರಪ್ಪ ಘೋಷಣೆ
ಇನ್ನು ಸಚಿವ ಸಂಪುಟಕ್ಕೆ ಏಳು ಮಂದಿ ನೂತನ ಸಚಿವರು ಸೇರ್ಪಡೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿರುವುದರಿಂದ ತೀವ್ರ ಕುತೂಹಲ ಮೂಡಿಸಿದೆ. ಸಚಿವ ಸ್ಥಾನ ದೊರೆಯದ ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಸಚಿವ ಸಂಪುಟದ ಅತೃಪ್ತಿ ಹೊಗೆಯಾಡುತ್ತಿರುವಾಗಲೇ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ.
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಹಿಂದೂ ವಿರೋಧಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುದಾನ ನೀಡುತ್ತಿದ್ದಾರೆ, ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಹಣಕಾಸು ಸ್ಥಿತಿ, ಸಚಿವ ಸಂಪುಟ ಪುನರ್ ರಚನೆ ಗೊಂದಲ, ಹಿಂದಿ ಹೇರಿಕೆ, ಬೆಳಗಾವಿ ಗಡಿ ವಿವಾದ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.