ಬೆಂಗಳೂರು: ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಪಾಟೀಲ್ ಎಂಬಾತ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಚ್.ಬಿ.ಆರ್ ಲೇಔಟ್ನಲ್ಲಿರುವ ರಾಘವೇಂದ್ರ ಹೋಟೆಲ್ ಬಳಿ ಗಲಾಟೆ ನಡೆಸಿದ್ದಾನೆ. ತಾನು ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಎಂದು ಹೇಳಿಕೊಂಡ ಈ ಆಸಾಮಿ, 50 ರೂಪಾಯಿ ಕೊಟ್ಟು 40 ರೂಪಾಯಿ ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಹೋಟೆಲ್ ಮಾಲೀಕರಾದ ಪದ್ಮಾವತಿ ಎಂಬುವರ ತಲೆಗೆ, ಕಾಲಿಗೆ ಒದ್ದು ದರ್ಪ ತೋರಿದ್ದಾನೆ.
ಇನ್ನು ಪದ್ಮಾವತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅವರ ಮಗ ನವೀನ್ ಗೌಡನ ಮೇಲೂ ಸಹ ಚೇರ್ನಿಂದ ಹಲ್ಲೆ ನಡೆಸಿದ್ದಾನೆ. ಈ ಕುರಿತು ಪದ್ಮಾವತಿ ಹಾಗೂ ಅವರ ಮಗ ನವೀನ್ ದೂರು ನೀಡಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.