ಆನೇಕಲ್: ತನ್ನ ಬಾರ್ನಲ್ಲಿ ರಾತ್ರಿ ವೇಳೆ ತಾನೇ ಹೋಗಿ ಮದ್ಯ ತಂದು ಮನೆಯಲ್ಲಿ ದುಪ್ಪಟ್ಟು ದರಕ್ಕೆ ಮಾರುತ್ತಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಈ ಘಟನೆ ನಡೆದಿದೆ. ಬಾರ್ ಮಾಲೀಕ ಶ್ರೀನಿವಾಸ್ ಬಂಧಿತ. ಲಾಕ್ಡೌನ್ನಿಂದಾಗಿ ಮದ್ಯದ ಬೇಡಿಕೆ ಹಚ್ಚಿದೆ. ಎಷ್ಟೋ ಮಂದಿ ಬ್ಲಾಕ್ನಲ್ಲಿ ದುಪ್ಪಟ್ಟು ಹಣ ನೀಡಿ ಖರೀದಿಸಲು ಮುಂದಾಗುತ್ತಿದ್ದಾರೆ. ಹಾಗಾಗಿ ಶ್ರೀನಿವಾಸ್ ತನ್ನದೇ ಬಾರ್ನಿಂದ ಮದ್ಯ ತಂದು ಮನೆಯಲ್ಲೇ ನಿತ್ಯ ಮಾರುತ್ತಿದ್ದ ಎನ್ನಲಾಗಿದೆ.
ಎಂದಿನಂತೆ ಇಂದು ಸಹ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶ್ರೀನಿವಾಸ್ ಹಾಗೂ ಸ್ನೇಹಿತ ಶಾಮುಲು ಮದ್ಯ ತರಲು ಹೋಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದಿದ್ದ ಹೆಬ್ಬುಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.