ಬೆಂಗಳೂರು: ಕೋವಿಡ್ ಮೂರನೇ ಅಲೆ ಸಂಬಂಧ ಮಕ್ಕಳ ಶುಶ್ರೂಷೆಗಾಗಿ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ವಿಧಾನಸಭೆ ಕಲಾಪಕ್ಕೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಕ್ಕಳ ಆಸ್ಪತ್ರೆ, ಮೂರನೇ ಅಲೆ ಬಂದರೆ ಮಕ್ಕಳ ವಾರ್ಡ್‌ಗಳ ಸಿದ್ಧತೆ ಬಗ್ಗೆ ಶಾಸಕ ಕೃಷ್ಣಪ್ಪ ವಿಷಯ ಪ್ರಸ್ತಾಪಿಸಿದರು. ಡೆಂಗ್ಯೂ ಜ್ವರ ಹೆಚ್ಚಾಗಿದೆ. ಮಕ್ಕಳ ವಿಚಾರವಾಗಿ ಏನು ಕ್ರಮ ಕೈಗೊಳ್ಳಲಾಗುತ್ತಿದೆ? ಎಂದು ಪ್ರಶ್ನಿಸಿದರು.
ಈ ವೇಳೆ ಉತ್ತರಿಸಿದ ಸಚಿವ ಸುಧಾಕರ್, ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎದುರಿಸುವ ಸಂಬಂಧ 25,800 ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, 502 ವೆಂಟಿಲೇಟರ್ ಸಿದ್ಧವಾಗಿವೆ. 285 ಮಕ್ಕಳ ತಜ್ಞರು, 1,255 ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮೂರು ವಾರದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಶೇ.20 ರಷ್ಟು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಹಾಸಿಗೆ ಮೀಸಲು ಇರಿಸಲಾಗಿದೆ. ಹಾಸಿಗೆಯ ಕೊರತೆ ಇಲ್ಲ. ಆದರೆ ಕೆಲ ತಾಲೂಕುಗಳಲ್ಲಿ ಕೊರತೆ ಆಗಿರುವ ವರದಿ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.