ಬೆಂಗಳೂರು: ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಷ್ಟು ದುರ್ನಾತ ಆಗುತ್ತಿತ್ತು ಎಂಬ ಬಗ್ಗೆ ದಾಖಲೆ ನೀಡಬಲ್ಲೆ. ಈವಾಗ ಚಾರಿತ್ರಹರಣ ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಿಎಸ್ಐ ಅಕ್ರಮದ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಯಾವ ಒತ್ತಡ ಏನೂ ಇಲ್ಲ, ಗಂಭೀರವಾಗಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಿಐಡಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಮಧ್ಯವರ್ತಿ, ಹಣ ಕೊಟ್ಟವರ ವಿರುದ್ಧವೂ ಕ್ರಮ ಆಗುತ್ತಿದೆ. ಇನ್ನೊಮ್ಮೆ ಪರೀಕ್ಷೆಯಲ್ಲಿ ಇಂತಹ ಘಟನೆ ಆಗಬಾರದು. ತನಿಖೆ ಆಗುತ್ತಿದೆ, ಯಾವುದೇ ಊಹೆಯ ಮಾತು ಹೇಳಲ್ಲ ಎಂದರು.
ಜೈಲುಗಳಲ್ಲಿ ಅಕ್ರಮ ನಡೆಯದಂತೆ ಬಿಗಿ ಕ್ರಮ: ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ ವಹಿಸಲಾಗುವುದು. ಒಂದೆರಡು ಜೈಲುಗಳಲ್ಲಿ ಕೆಲವರು ಇದ್ದಾರೆ. ಅದನ್ನು ಸರಿಪಡಿಸುತ್ತೇವೆ. ಮುರುಗನ್ ಸಮಿತಿ ವರದಿ ಆಧಾರದಲ್ಲಿ ಹರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 30 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ಐಆರ್ ಆಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದರು.
ಸಿಬ್ಬಂದಿಯ ವಿರುದ್ಧವೂ ಎಫ್ಐಆರ್ ದಾಖಲು ಮಾಡಲಾಗುತ್ತಿದೆ. ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪರಪ್ಪನ ಅಗ್ರಹಾರದಲ್ಲಿ 4 ಜಿ ಜಾಮರ್ ಹಾಕಲಾಗುವುದು. ಅತ್ಯಂತ ಶೀಘ್ರವಾಗಿ ಈ ಕ್ರಮ ಕೈಗೊಳ್ಳಲಾಗುವುದು. ಕೆಲವು ಸಿಬ್ಬಂದಿ ಅನಾಚಾರದಲ್ಲಿ ಕೈಜೋಡಿಸಿದ್ದರು. ಆದರೆ ಇವಾಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
1 ಲಕ್ಷ ಪೊಲೀಸರ ಮನೆಯಲ್ಲಿ ರಾಷ್ಟ್ರ ಧ್ವಜ: ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ 1 ಲಕ್ಷ ಪೊಲೀಸರ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಾಡಲಿದೆ ಎಂದು ತಿಳಿಸಿದರು. ಸ್ವಾತಂತ್ರ್ಯೋತ್ಸದ ಹಿನ್ನಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ : ಬೈರತಿ ಹೆಗಲಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ: ಕಾಫಿನಾಡಿಗೆ ಭೇಟಿ ನೀಡಿದ ಸಚಿವರು