ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಅನುಮತಿ ನೀಡಲು ಕರ್ನಾಟಕ ವಾಣಿಜ್ಯ ಕಾರ್ಯಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಈ ವಿಧೇಯಕದ ಪ್ರಕಾರ ರಾತ್ರಿ ಪಾಳಿಯಲ್ಲಿ ಮಹಿಳಾ ಉದ್ಯೋಗಿಗಳು ಕಾರ್ಖಾನೆ, ವಾಣಿಜ್ಯ ಮತ್ತು ಕಾರ್ಯಸಂಸ್ಥೆಗಳಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ. ರಾತ್ರಿ ಪಾಳಿ ಮಾಡುವ ಕಾರ್ಯಸಂಸ್ಥೆಗಳು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಧೇಯಕದಂತೆ ರಾತ್ರಿ ಪಾಳಿ ಮಾಡುವ ಮಹಿಳಾ ಉದ್ಯೋಗಿಗಳ ಒಪ್ಪಿಗೆಯನ್ನು ಲಿಖಿತವಾಗಿ ಪಡೆದುಕೊಳ್ಳಬೇಕು. ಜೊತೆಗೆ ಮಹಿಳಾ ಉದ್ಯೋಗಿಗೆ ನಿವಾಸದಿಂದ ಕೆಲಸದ ಸ್ಥಳಕ್ಕೆ ಮತ್ತು ಮನೆಗೆ ಹಿಂದಿರುಗಿಸಲು ಸಾರಿಗೆ ಸೌಲಭ್ಯಗಳನ್ನು ಉಚಿತವಾಗಿ ಹಾಗೂ ಸಾಕಷ್ಟು ಭದ್ರತೆಯಲ್ಲಿ ಒದಗಿಸಬೇಕು.
ಮಹಿಳಾ ಉದ್ಯೋಗಿಗಳ ಖಾಸಗಿತನ ಕಾಪಾಡಲು ಅವರಿಗೆ ಪ್ರತ್ಯೇಕವಾಗಿ ಅಗತ್ಯ ವಿಶ್ರಾಂತಿ ಕೊಠಡಿ, ವಿದ್ಯುತ್, ಶೌಚಾಲಯ, ಔಷಧಾಲಯ ಸೌಲಭ್ಯ ಒದಗಿಸಬೇಕು. ಮಹಿಳಾ ಉದ್ಯೋಗಿಗಳನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಮಾರ್ಗಸೂಚಿ ಪಟ್ಟಿಯನ್ನು ಕಂಪನಿಯ ಮೇಲ್ವಿಚಾರಣಾ ಅಧಿಕಾರಿಯೇ ನಿರ್ಧರಿಸಬೇಕು. ಒಂದು ವೇಳೆ ಷರತ್ತುಗಳನ್ನು ಪಾಲಿಸುವಲ್ಲಿ ವಿಫಲವಾದರೆ ಕಾರ್ಯಸಂಸ್ಥೆಗಳ ನೋಂದಣಿ ಪ್ರಮಾಣಪತ್ರ ರದ್ದುಗೊಳ್ಳಲಿದೆ.