ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ನೇಮಕ ಮಾಡಿರುವ ಸಕ್ಷಮ ತನಿಖಾ ಪ್ರಾಧಿಕಾರದಲ್ಲಿ ಖಾಲಿಯಿದ್ದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಸೇರಿದಂತೆ ಹಲವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಪಿ. ಹೇಮಲತಾ ಪ್ರಮಾಣ ಪತ್ರ ಸಲ್ಲಿಸಿ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ...ಐಎಂಎ ಬಹುಕೋಟಿ ವಂಚನೆ ಪ್ರಕರಣ.. ಆರೋಪಿತ ಸ್ಥಾನದಲ್ಲಿರುವ ಪೊಲೀಸರ ಆಸ್ತಿ ಜಪ್ತಿ ಕೋರಿ ಸರ್ಕಾರಕ್ಕೆ ಪತ್ರ
ಡಿ.9 ಮತ್ತು 22ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಐಎಂಎ ಸಕ್ಷಮ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಆ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವ ಮುನ್ನ ಅವರ ಪೂರ್ವಾಪರ ಮತ್ತು ಕಾರ್ಯದಕ್ಷತೆ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ನಿರ್ದೇಶನ ಅನುಪಾಲನೆಗೆ ಸಂಬಂಧಿಸಿದಂತೆ ಹೇಮಲತಾ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಐಎಂಎ ಸಕ್ಷಮ ಪ್ರಾಧಿಕಾರದಲ್ಲಿ ವಿವಿಧ ಕಾರಣಗಳಿಂದ ಖಾಲಿಯಿದ್ದ ಉಪ ವಿಭಾಗಾಧಿಕಾರಿ, ಜಂಟಿ ಕಾರ್ಯದರ್ಶಿ, ಹಿರಿಯ ಸಹಾಯಕ, ಕಿರಿಯ ಸಹಾಯಕ, ಕಾನೂನು ಅಧಿಕಾರಿ (ವಿಶೇಷ ನ್ಯಾಯಾಲಯ), ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2, ಸಹಾಯಕ ಕಂಟ್ರೋಲರ್, ಎಸ್‌ಐಟಿ ಉಪ ಪೊಲೀಸ್ ಅಧೀಕ್ಷಕರು, ಇನ್ಸ್‌ಪೆಕ್ಟರ್, ಶಿರಸ್ತೇದಾರ್, ಅಧೀಕ್ಷಕ ಲೆಕ್ಕಾಧಿಕಾರಿ ಮತ್ತು ಎಫ್‌ಡಿಎ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಸದ್ಯ ನೇಮಕಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿ ಪೂರ್ವಾಪರ ಹಾಗೂ ಕಾರ್ಯದಕ್ಷತೆ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕಗೊಳಿಸಿದ ಎಲ್ಲಾ ಆಡಳಿತ ಇಲಾಖೆಗಳು ಲಿಖಿತವಾಗಿ ಸ್ಪಷ್ಟಪಡಿಸಿವೆ. ಹಾಗೆಯೇ ಭವಿಷ್ಯದಲ್ಲಿ ಈ ಸಕ್ಷಮ ಪ್ರಾಧಿಕಾರದ ಹುದ್ದೆಗಳಿಗೆ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸುವ ಮುನ್ನ ಅವರ ಪೂರ್ವಾಪರ ಮತ್ತು ಕಾರ್ಯದಕ್ಷತೆ ಪರಿಶೀಲಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ಭರವಸೆ ನೀಡಲಾಗಿದೆ.