ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕುಡಿಯುವ ನೀರಿನ ಘಟಕಗಳ ಮೇಲೆ ಹಾಕಲಾಗಿರುವ ಪಾಲಿಕೆಯ ಮಾಜಿ ಸದಸ್ಯರ ಫೋಟೋ ತೆರವುಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಒತ್ತಾಯಿಸಿದೆ.
ಈ ಕುರಿತು ಪಕ್ಷದ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕೇವಲ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದ ಸದಸ್ಯರ ಫೋಟೊಗಳನ್ನು ತೆಗೆಯಬೇಕು. ಪುಕ್ಕಟ್ಟೆ ಪ್ರಚಾರದ ಮಾರ್ಗ ಕಂಡುಕೊಂಡಿರುವ ಮಾಜಿ ಸದಸ್ಯರು ಹಲವು ನೀರಿನ ಘಟಕಗಳಿಗೆ ಹೊಸದಾಗಿ ಫೋಟೊ ಅಳವಡಿಸುತ್ತಿದ್ದಾರೆ. ಬಿಬಿಎಂಪಿ ಅವಧಿ ಮುಗಿದ ಮೇಲೂ ಸುಮ್ಮನೆ ಕುಳಿತಿರುವ ಅಧಿಕಾರಿಗಳು ಈ ಕೂಡಲೇ ಪಾಲಿಕೆ ಸದಸ್ಯರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಎಂದರು.
ಪಾಲಿಕೆ ಸದಸ್ಯರ ಗೂಂಡಾಗಿರಿಗೆ ಹೆದರಿರುವ ಅಧಿಕಾರಿಗಳು, ಭಾವಚಿತ್ರಗಳನ್ನು ತೆಗೆಯಲು ಹೆದರಿದ್ದಾರೆ. ಆಡಳಿತಾಧಿಕಾರಿ ಗೌರವ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೇ ನೋಡಲ್ ಅಧಿಕಾರಿಗಳಿಗೆ ತೆರವುಗೊಳಿಸಲು ಸೂಚನೆ ನೀಡಬೇಕು ಎಂದರು.
ಬಿಬಿಎಂಪಿ ಚುನಾವಣೆ ನಡೆಸದೆ ದ್ರೋಹ ಬಗೆದಿರುವ ಬಿಜೆಪಿ ಸರ್ಕಾರ ಸೋಲಿನ ಭೀತಿಯಿಂದ ತನ್ನ ಅಭ್ಯರ್ಥಿಗಳ ಪ್ರಚಾರಕ್ಕೆ ವಾಮಮಾರ್ಗ ಹಿಡಿದಿದೆ. ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಎಂದು ಕಳೆದ 2-3 ವರ್ಷಗಳಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ ಭಾರೀ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಈ ಕೂಡಲೇ ಭಾವಚಿತ್ರಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.