ಕಲರ್ಸ್ ಕನ್ನಡ ವಾಹಿನಿಯಲ್ಲಿ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮ ಕುಮುದಾಳಾಗಿ ನಟಿಸಿರುವ ಅನಿಕಾ ಸಿಂಧ್ಯಾ, ಕುಮುದಾ ಪಾತ್ರವನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
ನಟನೆಯ ರೀತಿ-ನೀತಿ ತಿಳಿಯದ ಅನಿಕಾ ಸಿಂಧ್ಯಾ, ಕಾದಂಬರಿ ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿಕೊಟ್ಟರು. ನಂತರ ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಮನೆ ಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಆಕಾಶ ದೀಪ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ರು. ಆದರೆ, ಕಿರುತೆರೆ ಲೋಕದಲ್ಲಿ ಅವರಿಗೆ ಜನಪ್ರಿಯತೆ ತಂದು ಕೊಟ್ಟಿದ್ದು ಮಾತ್ರ ಕುಮುದ ಪಾತ್ರ.
ನೆಗೆಟಿವ್ ಪಾತ್ರಗಳಲ್ಲೇ ಹೆಚ್ಚಾಗಿ ಅಭಿನಯಿಸಿದ್ದ ಅನಿಕಾಗೆ, ಕುಮುದಾ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಒಪ್ಪಿಕೊಳ್ಳದೇ ತಿರಸ್ಕರಿಸಿದ್ದರು. ಅದಕ್ಕೆ ಕಾರಣ ನೆಗೆಟಿವ್ ರೋಲ್ಗೆ ಬ್ರಾಂಡ್ ಆಗಬಹುದೇನೋ ಎಂಬ ಭಯ. ಇದರ ಜೊತೆಗೆ ತಮ್ಮದೇ ವಯಸ್ಸಿನ ನಾಯಕ - ನಾಯಕಿಯರಿಗೆ ಅತ್ತೆ, ಚಿಕ್ಕಮ್ಮ, ಅತ್ತಿಗೆಯ ಪಾತ್ರ ಸಿಕ್ಕಾಗ ಕೊಂಚ ಬೇಸರವೂ ಆಗಿತ್ತು. ಯಾಕೆಂದರೆ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸಲು ಹೆಚ್ಚಿನವರಿಗೆ ಇಷ್ಟವಿರುವುದಿಲ್ಲ. ಕುಮುದಾ ಕೂಡಾ ವಯಸ್ಸಿಗೆ ಮೀರಿದ ಪಾತ್ರವಾಗಿದ್ದು,ಅನಿಕಾ ಹಿಂಜರಿಕೆಯಿಂದಲೇ ಗ್ರೀನ್ ಸಿಗ್ನಲ್ ನೀಡಿದ್ದರು.
ಆದರೆ, ಅದೇ ಪಾತ್ರದ ಮೂಲಕ ಇಂದು ಅವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಅನಿಕಾ ಇಂದು ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರೂ ಜನ ಅವರನ್ನು ಗುರುತಿಸುವುದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕುಮುದಾಳಾಗಿ. ಹೀಗಾಗಿ ಸಾಯುವ ತನಕ ನಾನು ಕುಮುದಾ ಪಾತ್ರವನ್ನ ಮರೆಯುವುದಿಲ್ಲ ಎಂದು ಅನಿಕಾ ಹೇಳಿದ್ದಾರೆ.