ಬೆಂಗಳೂರು: ನಗರದಲ್ಲಿ ಖಾಸಗಿ ಶಾಲೆಗಳ ಭರಾಟೆ ಮಧ್ಯೆ, ಸರ್ಕಾರಿ ಅಂಗನವಾಡಿಗಳತ್ತ ತಿರುಗಿ ನೋಡುವವರು ಇಲ್ಲದಾಗಿದೆ. ಬಡ, ಮಧ್ಯಮ ವರ್ಗದವರ ಮಕ್ಕಳ ಪಾಲಿಗೆ ಇಂದಿಗೂ ಅಂಗನವಾಡಿ, ಶಾಲೆ ಆರಂಭದ ಮೊದಲ ಮೆಟ್ಟಿಲಾಗಿದ್ದು, ಅನುದಾನ ಕೊರತೆಯಿಂದ ನಿರ್ಲಕ್ಷ್ಯಕ್ಕೊಳಗಾಗಿದೆ.
ಸೋಮವಾರ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಅಂಗನವಾಡಿ ಯೋಜನೆಯ ಶೇ.30ರಷ್ಟು ಅನುದಾನ ಕಡಿತಗೊಳಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಬುಧವಾರ (ಫೆ.3) ಪ್ರತಿಭಟನೆ ನಡೆಸಲು ಬೀದಿಗಿಳಿಯಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ...ಕೊಪ್ಪಳ: 767 ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ!
ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಅಂಗನವಾಡಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಬೇಕು. ಬಾಡಿಗೆ ಹಣ ಕನಿಷ್ಠ ₹5 ಸಾವಿರದಿಂದ ₹15 ಸಾವಿರಕ್ಕೆ ಏರಿಸಬೇಕು. ಎನ್ಆರ್ಹೆಚ್ಎಮ್ ನೌಕರರಿಗೆ ಹೆಚ್ಚುವರಿ ಭತ್ಯೆ ಕೊಡುವ ರೀತಿಯೇ ಅಂಗನವಾಡಿ ನೌಕರರಿಗೂ ಹೆಚ್ಚುವರಿ ಭತ್ಯೆ ಕೊಡಬೇಕು. ಭೌಗೋಳಿಕ ಆಧಾರದಲ್ಲಿ ಐಸಿಡಿಸಿ ಯೋಜನೆ ಪುನರ್ ರೂಪಿಸಬೇಕು, ಅಂಗನವಾಡಿ ನೌಕರರಿಗೆ ನಡೆಸುವ ಇಲಾಖಾ ಸಭೆಗಳಿಗೆ ಟಿಎ-ಡಿಎ ಹೆಚ್ಚಿಸಬೇಕು ಎಂದು ಈಗಾಗಲೇ ಹಲವಾರು ಬಾರಿ ಒತ್ತಾಯಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇತ್ತ ಬಾಡಿಗೆ ಕೊಡಲು ಹಣವೂ ಇಲ್ಲ. ಆರೇಳು ತಿಂಗಳಾದರೂ ಗ್ಯಾಸ್ ಹಣ - ಬಾಡಿಗೆ ಹಣ ಕೊಡದೇ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಜೊತೆಗೆ ಬಿಬಿಎಂಪಿಯೂ ನಗರದ ಅಂಗನವಾಡಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಕಳೆದ ತಿಂಗಳು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿತ್ತು.
ಸಂಘದ ಪೂರ್ವ ತಾಲೂಕಿನ ಪ್ರಧಾನ ಕಾರ್ಯದರ್ಶಿ ಟಿ.ರಾಜೇಶ್ವರಿ ಮಾತನಾಡಿ, ನಗರದ ಜನಸಂಖ್ಯೆಗೆ ತಕ್ಕಂತೆ ಪೌಷ್ಟಿಕಾಂಶ ಆಹಾರ ಪೂರೈಕೆ ಯೋಜನೆಗಳನ್ನು ಜಾರಿಗೆ ತರಲು, ಮಕ್ಕಳು ಮತ್ತು ಮಹಿಳಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಹೀಗಾಗಿ, ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಬೇಕು. ಬಾಡಿಗೆ ಹಣ ಕನಿಷ್ಠ 5 ಸಾವಿರದಿಂದ 15 ಸಾವಿರಕ್ಕೆ ಏರಿಸಬೇಕು. ಎನ್ಆರ್ಹೆಚ್ಎಮ್ ನೌಕರರಿಗೆ ಹೆಚ್ಚುವರಿ ಭತ್ಯೆ ಕೊಡುವ ರೀತಿಯೇ ಅಂಗನವಾಡಿ ನೌಕರರಿಗೂ ಹೆಚ್ಚುವರಿ ಭತ್ಯೆ ಕೊಡಬೇಕು ಎಂದರು.
ಭೌಗೋಳಿಕ ಆಧಾರದಲ್ಲಿ ಐಸಿಡಿಸಿ ಯೋಜನೆ ಪುನರ್ ರೂಪಿಸಬೇಕು. ಅಂಗನವಾಡಿ ನೌಕರರಿಗೆ ನಡೆಸುವ ಇಲಾಖಾ ಸಭೆಗಳಿಗೆ ಟಿಎ-ಡಿಎ ಹೆಚ್ಚಿಸಬೇಕು. ಜೊತೆಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದ್ದು, ಇದರಿಂದ ಅಂಗನವಾಡಿಗಳು ಮತ್ತಷ್ಟು ಮೂಲೆ ಗುಂಪಾಗಲಿವೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.