ಬೆಂಗಳೂರು: ಬಿಎಂಟಿಸಿ ನೌಕರನಲ್ಲಿಯೂ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ನಿಗಮ ಸ್ಪಷ್ಟನೆ ನೀಡಿದೆ. ಸೋಂಕಿತ ವ್ಯಕ್ತಿ, ಮೂರು ದಿನಗಳ ರಜೆಯಲ್ಲಿದ್ದು, ಸ್ವಯಂಪ್ರೇರಿತವಾಗಿ ಕೋವಿಡ್-19 ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿಯ ಫಲಿತಾಂಶ ಜೂನ್ 10ರಂದು ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಗೆ ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ. ಹೀಗಾಗಿ, ಆರೋಗ್ಯ ಅಧಿಕಾರಿಗಳಿಂದ ಸೋಂಕು ಪತ್ತೆ ಹಚ್ಚುವ ಕಾರ್ಯ ಮುಂದುವರಿದೆ. ಈ ವ್ಯಕ್ತಿ ಕಲಬುರಗಿ- ವಿಜಯಪುರ ಜಿಲ್ಲೆಗಳಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.
ಸದ್ಯಕ್ಕೆ ಕೆಲಸದ ಸ್ಥಳವನ್ನು ಸೋಂಕು ರಹಿತ ಮಾಡಲು ಸ್ಯಾನಿಟೈಸಿಂಗ್ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮುಂದಿನ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ. ಈಗ ಸೋಂಕಿತ ಸಿಬ್ಬಂದಿಯ ಸಂಪರ್ಕದಲ್ಲಿರುವವರನ್ನು ಟ್ರ್ಯಾಕ್ ಮಾಡಲಾಗುತ್ತಿದ್ದು, ಆತನ ಕುಟುಂಬದವರನ್ನ ಕ್ವಾರಂಟೈನ್ ಮಾಡಲಾಗಿದೆ.