ಬಂಟ್ವಾಳ: ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ದರೋಡೆಕೋರರು ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿ ನಿವಾಸಿ ಸುಲೈಮಾನ್ ಅವರ ಪತ್ನಿ ಬಿ.ಪಾತುಮ್ಮ (50) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಕೆಯ ಪತಿ ಸುಲೈಮಾನ್ ಅವರು ಅಡ್ಡದ ಬೀದಿಯಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದು, ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಅಂಗಡಿಗೆ ಹಿಂತಿರುಗಿದ್ದರು.
ನಂತರ ಮನೆಯತ್ತ ಬಂದ ಹೆಲ್ಮೆಟ್ ಧರಿಸಿದ್ದ ಇಬ್ಬರು ಆಗಂತುಕರು ಬಾಗಿಲು ತಟ್ಟಿದರು. ಈ ಸಂದರ್ಭ ಮಹಿಳೆ ಬಾಗಿಲು ತೆರೆದು ಹೊರಗಡೆ ಬಂದಿದ್ದಾರೆ. ಕರೆಂಟ್ ಬಿಲ್ ಕಟ್ಟಿದ್ದೀರಾ ಎಂದು ಮಹಿಳೆಯಲ್ಲಿ ಕೇಳಿದ್ದು, ಈ ಸಂದರ್ಭ ಮಹಿಳೆ ನಾವು ಈಗಾಗಲೇ ಕರೆಂಟ್ ಬಿಲ್ ಕಟ್ಟಿದ್ದೇವೆ ಎಂದು ಹೇಳಿ ಬಿಲ್ನ ಪ್ರತಿ ತರಲು ಮನೆಯೊಳಗಡೆ ತೆರಳಿದ್ದಾರೆ. ಅವರ ಹಿಂದೆಯೇ ಮನೆಯೊಳಗಡೆ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ.
ಮಹಿಳೆಯ ಕೈ, ತಲೆಗೆ ಮತ್ತು ಹೊಟ್ಟೆಗೆ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ನಂತರ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಮಹಿಳೆ ಹೊರಳಾಡಿಕೊಂಡು ಹೊರಗಡೆ ಬಂದು ಸ್ಥಳೀಯರನ್ನು ಕರೆದಿದ್ದಾರೆ. ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಕಾರ್ಮಿಕರು ಮನೆಯತ್ತ ಬಂದು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತುರುವೇಕೆರೆ ಶಾಸಕರ ತೋಟಕ್ಕೆ ಬರಲಿದೆ 26 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ಹೋರಿ
ಬಳಿಕ ಅವರಿಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಒಂದು ಕೋಣೆಯಲ್ಲಿದ್ದ ಕಪಾಟು ತೆರೆದಿದ್ದು, ಉಳಿದೆಡೆ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. ಕಪಾಟಿನಿಂದ ಹಣ ಅಥವಾ ಚಿನ್ನಾಭರಣ ಕಳವು ನಡೆದಿರುವ ಬಗ್ಗೆ ಖಚಿತಗೊಂಡಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ಇ, ಎಸೈ ಸಂಜೀವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.