ಬೆಂಗಳೂರು: ಸರಿಯಾದ ಸಮಯಕ್ಕೆ ಬುಕ್ ಮಾಡಿದ್ದ ಬೈಕ್ ಕೊಟ್ಟಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿ ಶೋ ರೂಂ ಮಾಲೀಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಎಂಎಂ ರೋಡ್ ಬಳಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಚಂದನ್ ಸಿಂಗ್ (29)ಅನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಚಂದನ್ ಸಿಂಗ್ ವಿನಾಯಕ ಮೋಟಾರ್ಸ್ ಶೋ ರೂಂ ಮಾಲೀಕನಾಗಿದ್ದು, ಕೆಲ ದಿನಗಳ ಹಿಂದೆ ಆರೋಪಿಗಳು ಬೈಕ್ ಖರೀದಿಸಲು ಶೋ ರೂಮ್ಗೆ ಬಂದಿದ್ದರು. ಮುಂಗಡವಾಗಿ 20 ಸಾವಿರ ರೂ. ನೀಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಶೋ ರೂಂ ಬಂದ್ ಆಗಿತ್ತು. ಸಕಾಲಕ್ಕೆ ಬೈಕ್ ಕೊಟ್ಟಿಲ್ಲ ಎಂದು ಕೋಪಗೊಂಡ ಆರೋಪಿಗಳು ನಿನ್ನೆ ಮಧ್ಯಾಹ್ನ ಶೋ ರೂಂ ಬಳಿ ಬಂದಿದ್ದಾರೆ. ಈ ವೇಳೆ ಬೈಕ್ ಖರೀದಿ ವಿಚಾರದಲ್ಲಿ ಚಂದನ್ ಸಿಂಗ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಕ್ರೋಶಗೊಂಡ ಆರೋಪಿಗಳು ಚಂದನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಚಂದನ್ ಸಿಂಗ್ ಈ ಹಿಂದೆ ಗಾಂಜಾ ಕೇಸ್ನಲ್ಲಿ ಭಾಗಿಯಾಗಿದ್ದರಿಂದ ಪೊಲೀಸರು ಜೈಲಿಗಟ್ಟಿದ್ದರು. ಕೆಲ ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.