ಬೆಂಗಳೂರು: ರಾಜ್ಯದಲ್ಲಿ ಈವರೆಗೂ ಬರೀ ನಾಯಕತ್ವ ಬದಲಾವಣೆ ಕುರಿತ ಸುದ್ದಿಗಳು ಮಾತ್ರ ಆಗಾಗ ಬಂದು ಮರೆಯಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಜೀನಾಮೆಗೆ ಸಿದ್ಧ ಎನ್ನುವ ಹೇಳಿಕೆ ನೀಡಿ ಕೇಸರಿ ಪಾಳಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದಾರೆ.
ಓದಿ: ನಾಯಕತ್ವ ಬದಲಾವಣೆ ಅಂದವರ ವಿರುದ್ಧ ಶಿಸ್ತುಕ್ರಮ : ಸಚಿವ ಆರ್. ಅಶೋಕ್
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುತ್ತಿದ್ದಂತೆ, ಸಂಪುಟ ಸಹೋದ್ಯೋಗಿಗಳು ಸಿಎಂ ಮನೆಗೆ ದೌಡಾಯಿಸುತ್ತಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಅಭಯ ನೀಡಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದಾರೆ.
ವಿಧಾನಸೌಧದಿಂದ ಅಧಿಕೃತ ನಿವಾಸ ಕಾವೇರಿಗೆ ಸಿಎಂ ಯಡಿಯೂರಪ್ಪ ವಾಪಸ್ಸಾಗುತ್ತಿದ್ದಂತೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಕಾವೇರಿಗೆ ಆಗಮಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒಂದು ಗಂಟೆ ಸುದೀರ್ಘ ಮಾತುಕತೆ ನಡೆಸಿದರು.
ಕೋವಿಡ್ ಸಮಯದಲ್ಲಿ ರಾಜಕಾರಣದ ಚಟುವಟಿಕೆ ಸ್ವಪಕ್ಷೀಯರಿಂದಲೇ ನಡೆಯುತ್ತಿರುವುದಕ್ಕೆ ಸಿಎಂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಎರಡು ಬಾರಿ ಕೋವಿಡ್ ಸೋಂಕಿಗೆ ಸಿಲುಕಿದರೂ ಧೃತಿಗೆಡದೆ ಕೆಲಸ ಮಾಡುತ್ತಿದ್ದೇನೆ. ಇಷ್ಟಾದರೂ ನನ್ನ ಬದಲಾವಣೆ ಬಗ್ಗೆ ನಿರಂತರ ಹೇಳಿಕೆ ನೀಡುತ್ತಿರುವುದು ನೋವು ತರಿಸಿದೆ. ಹಾಗಾಗಿ ಮನನೊಂದು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಬೇಕಾಯಿತು ಎಂದು ಆಪ್ತ ಸಚಿವರ ಮುಂದೆ ಸಿಎಂ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರೂ, ಪದೇ ಪದೇ ಅಡ್ಡಿ ಆತಂಕಗಳನ್ನೇ ಒಡ್ಡಲಾಗುತ್ತಿದೆ. ಸ್ವಪಕ್ಷೀಯ ನಾಯಕರೇ ಈ ರೀತಿ ಮಾಡಿದರೆ ಹೇಗೆ? ಕಷ್ಟಪಟ್ಟು ಅಧಿಕಾರಕ್ಕೆ ಬಂದಿದ್ದೇವೆ. ಹಾಗಿರುವಾಗ ಆಡಳಿತ ನಡೆಸುವ ಹೆಜ್ಜೆ ಹೆಜ್ಜೆಗೂ ನಾಯಕತ್ವ ಬದಲಾವಣೆ ಅಪಸ್ವರ ಎತ್ತಿದರೆ ಹೇಗೆ ಆಡಳಿತ ನಡೆಸಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ.
ಯಡಿಯೂರಪ್ಪ ಅವರಿಗೆ ಸಮಾಧಾನದ ಮಾತನಾಡಿರುವ ಹಿರಿಯ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗು ಆರ್.ಅಶೋಕ್, ನೀವು ನಮ್ಮ ಪ್ರಶ್ನಾತೀತ ನಾಯಕ, ನಿಮ್ಮ ನಾಯಕತ್ವದಲ್ಲೇ ನಾವು ಮುಂದುವರೆಯುತ್ತೇವೆ. ಸಂಪುಟ ಸಹೋದ್ಯೋಗಿಗಳೆಲ್ಲರೂ ನಿಮ್ಮ ಜೊತೆಯಲ್ಲೇ ಇದ್ದೇವೆ ಎನ್ನುವ ಅಭಯ ನೀಡಿ ಮುಖ್ಯಮಂತ್ರಿಗಳ ಬೇಸರ ತಣಿಸುವ ಕೆಲಸ ಮಾಡಿದ್ದಾರೆ. ನಂತರ ಡಿಸಿಎಂ ಅಶ್ವತ್ಥನಾರಾಯಣ್ ಸೇರಿದಂತೆ ಹಲವು ಸಚಿವರು ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.