ಬೆಂಗಳೂರು: ಎಲೆಕ್ಟ್ರಾನಿಕ್ಸ್ ಹಾಗು ಆಟೋ ಮೊಬೈಲ್ ವಲಯದಲ್ಲಿ ಮುಂಚೂಣಿಯಲ್ಲಿರುವ ಕೊರಿಯಾ ಗಣರಾಜ್ಯ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಗಳ ನಡುವಣ ಬಾಂಧವ್ಯ ಬಲಗೊಳ್ಳುವುದರಿಂದ ಎರಡೂ ಕಡೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಕೊರಿಯಾ ಗಣರಾಜ್ಯದ ರಾಯಭಾರಿ ಜೇ-ಬಾಕ್ ಚಾಂಗ್ ಅವರ ನೇತೃತ್ವದ ನಿಯೋಗದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಿಎಂ, ಕರ್ನಾಟಕ ರಾಜ್ಯವು ಕೊರಿಯಾದೊಂದಿಗೆ ಹಲವು ದಶಕಗಳ ನಂಟು ಹೊಂದಿರುವುದು ಹೆಮ್ಮೆಯ ವಿಷಯ. ಕೊರಿಯಾ ಗಣರಾಜ್ಯವು ನೂತನ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುತ್ತಿರುವುದು ಶ್ಲಾಘನೀಯ ಎಂದರು.
![ಕೊರಿಯಾ ಗಣರಾಜ್ಯದ ರಾಯಭಾರಿಗಳೊಂದಿಗೆ ಸಿಎಂ ದ್ವಿಪಕ್ಷೀಯ ಮಾತುಕತೆ](https://etvbharatimages.akamaized.net/etvbharat/prod-images/kn-bng-01-cm-korea-delegate-meet-script-7208080_07072022132249_0707f_1657180369_563.jpg)
ಭಾರತ ದೇಶ ಹಾಗೂ ಕರ್ನಾಟಕ ರಾಜ್ಯ ಇಂದು ಅತ್ಯಂತ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲ ಹಾಗೂ ಕಾರ್ಮಿಕರ ಲಭ್ಯತೆ ಮತ್ತಿತರೆ ಅನುಕೂಲಗಳು ಭಾರತದಲ್ಲಿ ಹೂಡಿಕೆದಾರರ ಆಕರ್ಷಣೆಯ ತಾಣವಾಗಿಸಿದೆ. ಅದರಲ್ಲೂ ಕರ್ನಾಟಕ ರಾಜ್ಯ ದೇಶದ ಶೇ. 38 ರಷ್ಟು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ತಂತ್ರಜ್ಞಾನ ಆಧಾರಿತ ಉದ್ಯಮಿಗಳ ನೆಲೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ಕೊರಿಯಾ ಕೈಜೋಡಿಸಿದಲ್ಲಿ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಇಬ್ಬರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ನವೆಂಬರ್ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಕೊರಿಯಾದ ರಾಯಭಾರಿಯವರಿಗೆ ಆಹ್ವಾನ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಕೊರಿಯಾದ ರಾಯಭಾರಿ ಜೇ-ಬಾಕ್ ಚಾಂಗ್, ಕೊರಿಯಾ ಗಣರಾಜ್ಯವು ಕರ್ನಾಟಕದೊಂದಿಗೆ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಲು ಉತ್ಸುಕವಾಗಿದ್ದು, ಹಲವು ಸ್ಟಾಟ್ಅಪ್ಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಕೊರಿಯನ್ ಕಂಪನಿಗಳು ನೆಲೆಸಿವೆ. ಕೊರಿಯಾ ರಾಯಭಾರ ಕಚೇರಿಯು ಬೆಂಗಳೂರಿನಲ್ಲಿ “ಕೊರಿಯಾ ಆನ್ ದ ಮೂವ್” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಆರ್ಥಿಕ ಸಹಕಾರದ ಕುರಿತು ಆಯೋಜಿಸಿದ ಕಾರ್ಯಕ್ರಮವೂ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಬಿಜೆಪಿ ಸರ್ಕಾರದ ಬೊಕ್ಕಸದಲ್ಲಿ ಹಣವಿದೆ, ಬೊಮ್ಮಾಯಿ ಸರ್ಕಾರ ಹೆಚ್ಚು ತೆರಿಗೆ ಸಂಗ್ರಹಿಸಿದೆ'