ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಸಮಸ್ಯೆಗಳನ್ನ ಬಗೆಹರಿಸಲು ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸದಾಶಿವನಗರ ಬಳಿ ಇರುವ ಮನೆಯಲ್ಲಿಯೇ ಇದ್ದಾರೆ. ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಶಾಸಕರಾದ ಅಮರೇಗೌಡ ಭಯ್ಯಾಪೂರ ಮತ್ತು ಶರಣಬಸಪ್ಪಗೌಡ ದರ್ಶನಾಪುರ ಅವರು ಬಿಜೆಪಿಯತ್ತ ಹೋಗುವ ಶಾಸಕ ಪಟ್ಟಿಯಲ್ಲಿ ಇದ್ದಾರೆ ಎನ್ನಲಾಗ್ತಿದೆ. ಹೀಗಾಗಿ ದರ್ಶನಾಪೂರ ಮತ್ತು ಭಯ್ಯಾಪೂರ ಜೊತೆ ಖರ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಖರ್ಗೆ ನಿವಾಸದ ಎದುರು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ ಮಾತನಾಡಿ, ನಾನು ಬಿಜೆಪಿಗೆ ಹೋಗಲ್ಲ, ಕಾಂಗ್ರೆಸ್ ನಲ್ಲೇ ಇರ್ತೀನಿ. ನಾನು ಹತ್ತು ಬಾರಿ ಯೋಚಿಸಿದ್ರು ಬಿಜೆಪಿ ಹೋಗುವ ಸಂಭವವಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆಯಲ್ಲ. ನಾನು ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಗಿದ್ದೇನೆ. ಮುಖಂಡರು ಏನು ಹೇಳುತ್ತಾರೋ ಅದನ್ನೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.