ಬೆಂಗಳೂರು: ಮರಳಿನ ಕೊರತೆಯನ್ನು ನೀಗಿಸಲು ರಾಜ್ಯದಲ್ಲಿ ಹೆಚ್ಚು ಜಲ್ಲಿ ಕ್ರಷರ್ಗಳಿಗೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮರಳಿನ ಕೊರತೆಯನ್ನು ನೀಗಿಸಲು ಹೆಚ್ಚಿನ ಪ್ರಮಾಣದಲ್ಲಿ ಎಂ ಸ್ಯಾಂಡ್ ಉತ್ಪಾದಿಸಲು ಸರ್ಕಾರ ಬಯಸಿದೆ. ಇದೇ ಕಾರಣಕ್ಕಾಗಿ ಮರಳು ನೀತಿಗೆ ತಿದ್ದುಪಡಿ ತಂದು ಹೆಚ್ಚು ಪ್ರಮಾಣದಲ್ಲಿ ಎಂ ಸ್ಯಾಂಡ್ ಉತ್ಪಾದಿಸಲು ಉತ್ತೇಜನ ನೀಡಲಾಗುವುದು ಎಂದು ಗಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಮರಳು ಮಾಫಿಯಾ ಬಂದ್ಗೆ ಕ್ರಮ: ಮರಳು ನೀತಿಗೆ ತಿದ್ದುಪಡಿ ತಂದು ಹೆಚ್ಚು ಜಲ್ಲಿ ಕ್ರಷರ್ಗಳಿಗೆ ಅನುಮತಿ ನೀಡಿದ್ರೆ, ಆ ಮೂಲಕ ಎಂ ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಆಕ್ರಮ ಜಲ್ಲಿ ಕ್ರಷರ್ಗಳ ಹಾವಳಿ ಕಡಿಮೆಯಾಗಲಿದೆ. ರಾಜ್ಯದಲ್ಲಿರುವ ಮರಳಿನ ಬೇಡಿಕೆಯನ್ನು ಪೂರೈಸಲು ಎಂ ಸ್ಯಾಂಡ್ನ್ನೇ ನೆಚ್ಚುವುದು ಅನಿವಾರ್ಯವಾಗಿದೆ. ಎಂ ಸ್ಯಾಂಡ್ನ್ನು ಪರಿಪೂರ್ಣವಾಗಿ ಬಳಕೆ ಮಾಡತೊಡಗಿದರೆ ಮರಳು ಮಾಫಿಯಾ ಶಾಶ್ವತವಾಗಿ ಬಂದ್ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಪ್ರತಿ ವರ್ಷ 45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಇದರಲ್ಲಿ 35 ಲಕ್ಷ ದಶಲಕ್ಷ ಟನ್ ನಷ್ಟು ಬೇಡಿಕೆ ಎಂ ಸ್ಯಾಂಡ್ನಿಂದ ಪೂರೈಕೆಯಾಗುತ್ತಿದೆ. ಆದರೆ ಲಭ್ಯವಿರುವ ಮರಳಿನ ಪ್ರಮಾಣ ಐದು ದಶಲಕ್ಷ ಟನ್ಗಳಷ್ಟಿದ್ದು, ಇದರಿಂದಾಗಿ ಇನ್ನೂ ಐದು ದಶಲಕ್ಷ ಟನ್ಗಳಷ್ಟು ಮರಳಿನ ಕೊರತೆ ಇದೆ. ಈಗ ಲಭ್ಯವಾಗುತ್ತಿರುವ ಐದು ದಶಲಕ್ಷ ಟನ್ ಮರಳನ್ನು ಹಂಚಿಕೆ ಮಾಡಲು ಹಟ್ಟಿ ಮೈನ್ಸ್ ಮತ್ತು ಕೆ.ಎಸ್.ಎಂ.ಐ.ಎಲ್ ಗೆ ಅನುಮತಿ ನೀಡಲಾಗಿದೆ ಎಂದರು.
ಹರಾಜಿಗೆ ತಯಾರಿ: ಪ್ರತಿ ಟನ್ ಮರಳು 800 ರೂ.ಗಳಿಗೆ ಪೂರೈಕೆಯಾಗುತ್ತಿದ್ದು, ಎಂ ಸ್ಯಾಂಡ್ ಬೆಲೆ ಪ್ರತಿ ಟನ್ಗೆ 700 ರೂ.ನಿಂದ 1,200 ರೂ. ಗಳವರೆಗಿದೆ. ರಾಜ್ಯದಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 28 ಅದಿರು ಬ್ಲಾಕ್ಗಳ ಪೈಕಿ 12 ಬ್ಲಾಕ್ಗಳನ್ನು ಹರಾಜು ಮಾಡಲಾಗಿದೆ. ಇನ್ನುಳಿದ ಹದಿನಾರು ಬ್ಲಾಕ್ಗಳನ್ನು ಮರು ಹರಾಜು ಮಾಡಲು ತಯಾರಿ ನಡೆದಿದೆ. ಈ ಮೂಲಕ ರಾಜ್ಯದ ಗಣಿ ಆದಾಯದ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬುಲ್ಡೋಜರ್ ಮಾದರಿ ಶಿಕ್ಷೆಯ ಬಗ್ಗೆ ಚರ್ಚೆ ಇಲ್ಲ: ಸಚಿವ ನಾರಾಯಣ ಗೌಡ
ಆದಾಯ ಹೆಚ್ಚಳ: ರಾಜ್ಯದಲ್ಲಿ ಗಣಿಗಾರಿಕೆ ಬಾಬ್ತಿನಲ್ಲಿ ಆದಾಯ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷ 6,308 ಕೋಟಿ ರೂ. ಆದಾಯ ಬಂದಿದೆ. ಅದರ ಹಿಂದಿನ ಸಾಲಿನಲ್ಲಿ ಆದಾಯದ ಪ್ರಮಾಣ 4,357 ಕೋಟಿ ರೂ.ಗಳಷ್ಟಿತ್ತು. ಈಗ ಅದಕ್ಕಿಂತ ಶೇ.145 ರಷ್ಟು ಪ್ರಮಾಣದಲ್ಲಿ ಆದಾಯ ಬಂದಿದೆ. ತುಮಕೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಕ್ರಮ ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯಕ್ಕಾಗಿ 23 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಮಾಹಿತಿ ನೀಡಿದರು.