ಬೆಂಗಳೂರು: ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯಾ ಮೆಡಿಸಿನ್ ನಡೆಯಿಂದಾಗಿ ಇಡೀ ದೇಶದ ಆಧುನಿಕ ವೈದ್ಯಕೀಯ ವೃತ್ತಿಯು ಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.
ಅಲೋಪತಿ ವೈದ್ಯರು ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತಾನಾಡಿದ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಜಯಲಾಲ್, ಜನರ ಜೀವದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಹಲವು ವಿಧಾನಗಳಿವೆ. ಅವುಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಸ್ವಾತಂತ್ರ ನಂತರ ಆಧುನಿಕ ವೈದ್ಯ ಪದ್ಧತಿಯಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ ಹೇಗೆ ಮಾಡುತ್ತಾರೆ ಎಂದು ಮಾಹಿತಿ ಇಲ್ಲ. ಆದರೆ ಈಗ ಆಯುರ್ವೇದದ ಪಿಜಿ ಕೋರ್ಸ್ಗಳಲ್ಲಿ ಆಪರೇಷನ್ ಮಾಡುವ ಪದ್ಧತಿಯನ್ನು ಅಳವಡಿಸಿದ್ದಾರೆ ಅಂತ ತಿಳಿಸಿದರು.
ಇನ್ನು ನಾವು ಕೇಂದ್ರ ಸರ್ಕಾರದ ಮಿಕ್ಸೋಪತಿ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಡಿಸೆಂಬರ್ 8 ರಂದು ಧರಣಿ ಮಾಡಿದ್ದೆವು, 11 ರಂದು ಒಂದು ದಿನದ ಒಪಿಡಿ ಸೇವೆ ಕೂಡ ಬಂದ್ ಮಾಡಿದ್ದೆವು. ಈಗ ಫೆಬ್ರವರಿ 1 ರಿಂದ 14ರ ವರೆಗೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ದೇಶದಲ್ಲಿ 50 ಕಡೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.
ಇನ್ನು ಈ ಕುರಿತು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಇದೇ 8 ರಂದು ಮೊದಲ ವಿಚಾರಣೆ ಇದೆ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದ್ದು, ಮುಂದಿನ ಹಂತದ ಹೋರಾಟದ ಕುರಿತು ತಿಳಿಸುತ್ತೇವೆ ಎಂದು ಅಧ್ಯಕ್ಷ ಡಾ ಜಯಲಾಲ್ ತಿಳಿಸಿದರು.